Sunday, November 21, 2021

ಪ್ರಾಣ ವಿದ್ಯಾ ವೇದ ರಹಸ್ಯ - 1

ಪ್ರಾಣ ವಿದ್ಯೆ ಅಂದರೆ ಪ್ರಾಣ ಉಳಿಸುವ ಸಿರು, ದೇಹದಲ್ಲಿ ತಯಾರಾಗುವ ವಾಯು, ಜಲ ಮತ್ತು ಆವಿ ಅಮೃತ, ಪರಿಸರದಲ್ಲಿ ಇರುವ ವಾಯು ಮತ್ತು ಆವಿ ಅಮೃತ, ಇಂತಹ ಗುಪ್ತ ಸಾರವನ್ನು ತಿಳಿಸಿರುವ ವೇದ ರಹಸ್ಯಗಳ ಬೇಧನೆ ಮತ್ತು ಬೋಧನೆ ಈ ಪುಸ್ತಕದ ಮೂಲ ಉದ್ದೇಶ. ಆರೋಗ್ಯ ಮತ್ತು ಜ್ಞಾನಕ್ಕೆ ಮೂಲ ಪರಾ ವಿದ್ಯೆ, ಇದು ಅಕ್ಷರ ವಿದ್ಯೆ, ಪುರಾತನ ಗ್ರಂಥಗಳ ಶ್ಲೋಕಗಳನ್ನು ಅಕ್ಷರ ರೀತ್ಯ ಅನುವಾದಿಸಿದಾಗ ಸಿಗುವ ಆವಿಷ್ಕಾರವೇ ಕುಂಡಲಿನಿ ಪ್ರಾಣಾಯಾಮ ಮತ್ತು ಧ್ಯಾನ ಭೋದಿನೆಯಾಗಿದೆ, ಸಕಾರಣದಿಂದ ಇಲ್ಲಿವರೆಗೆ ಇದ್ದ ಹಲವು ರೀತಿಯ ವ್ಯಾಖ್ಯಾನದ ಜೊತೆಗೆ ಅದ್ಭುತ ಲೋಕವನ್ನು ತೋರುವ ಈ ವ್ಯಾಖ್ಯಾನಕೊಟ್ಟು ಎಲ್ಲಾ ಚಾರಿತ್ರಿಕ ಚಿಂತನಾಕಾರರ ಸಮಗ್ರ ಭಾವ ಕ್ರೋಡೀಕರಣ ಮಾಡಿ  ಕೊಡುವ ಗ್ರಂಥ ಸಾರವೇ ಇದು, ಇದನ್ನು ಆಚಾರ್ಯತ್ರಯರಿಗೆ, ಸಕಲ ಹಿಂದೂ ಮಹರ್ಷಿಗಳಿಗೆ, ದಿ. ಶ್ರೀ ಜಯಚಾಮರಾಜೇಂದ್ರ ಒಡೆಯರ್ ಬಹದ್ದೂರ್ ಧರ್ಮ ಪ್ರಭುಗಳಿಗೆ, ಸಕಲ ಸಂಸ್ಕೃತ ಪಂಡಿತರಿಗೆ, ಸಕಲ ಹಿಂದೂ ಮಠಾಧಿಪತಿಗಳಿಗೆ, ಧರ್ಮ ಗುರುಗಳಿಗೆ, ಸನಾತನ ಭಕ್ತರಿಗೆ ಭಕ್ತಿ ಪೂರ್ವಕ ಸಮರ್ಪಣೆ.

ಪುಸ್ತಕ ಮುದ್ರಣ: ಇಲ್ಲ, ---------------------------------------------ಆನ್ಲೈನ್ ಪಿ.ಡಿ.ಎಫ್ ಬಿಡುಗಡೆ : 2025

 PRANA VIDYA VEDA RAHASYA

 

Researched, Collected & Written By

Copyright holder

SRIDHARA BABU N, Advocate

SBN LAW CHAMBER, 7TH CROSS,1ST MAIN

SriRamanagara, Behind RK Sweets

Gumchi Circle, Tumakuru -572101

PH: 9880339764

ಪ್ರಾಣ ವಿದ್ಯಾ ವೇದ ರಹಸ್ಯ

ಲೇಖಕರು, ಸಂಶೋಧಕರು ಮತ್ತು ಸಂಗ್ರಹಕಾರರು ಗ್ರಂಥದ ಹಕ್ಕುದಾರರು

ಶ್ರೀಧರ ಬಾಬು. ಎನ್

ವಕೀಲರು, ತುಮಕೂರು ಮೊ. 9880339764

ಎಸ್.ಬಿ.ಎನ್. ಲಾ ಚೇಂಬರ್. 7ನೇಕ್ರಾಸ್, 1ನೇ ಮೈನ್ ಶ್ರೀರಾಮನಗರ, ಆರ್.ಕೆ. ಸ್ವೀಟ್ಸ್ ಹಿಂಭಾಗ

ಗುಂಚಿ ಸರ್ಕಲ್, ತುಮಕೂರು -572101

 

ಆಚಾರ್ಯ ತ್ರಯರಿಗೆ ಭಕ್ತಿ ನಮನಗಳು

ಪುಸ್ತಕವನ್ನು ಪೂರ್ಣ ಪಿ.ಡಿ.ಎಫ  ಈ ಕೆಳಗಿನ ಲಿಂಕ್ ನಲ್ಲಿ ಪಡೆಯಿರಿ 


ಆತ್ಮವಿಲ್ಲವೆಂಬ ಬೌದ್ದರ ನೈರಾತ್ಮ ದರ್ಶನವು ಅತಿರೇಕ ದೆಸೆಯಲ್ಲಿ ಧರ್ಮಾಧರ್ಮ ವಿವೇಚನೆಯನ್ನು ಕಳೆದುಕೊಂಡಾಗ ಹಾಗೂ ದೇಶಾದ್ಯಂತ ಬೌದ್ಧ ಭಿಕ್ಷುಗಳ ಬಿಕ್ಷಾ ಪಾತ್ರೆಗಳೇ ಕಾಣಿಸುವಂತಾಗಿ ವೈದಿಕ ಸಿದ್ಧಾಂತಕ್ಕೆ ಕಳವಳವುಂಟಾದಾಗ ಶಂಕರಾಚಾರ್ಯರು (ಕ್ರಿ .ಶ. 655 - 687) ಅವತರಿಸಿದರು. ವೇದಾಂತದರ್ಶನವು ಅಧ್ಯಾತ್ಮದರ್ಶನ ಎಂದರೆ ಆತನನ್ನು ಸಾಧಿಸುವ ದರ್ಶನ ಎಂದು ಸಾರಿದರು, ತಮ್ಮ ಅತ್ಯಲ್ಪ ಜೀವಿತಕಾಲದಲ್ಲೇ ವಿಸ್ತಾರ ಭಾಷ್ಯಾದಿಗಳನ್ನು ರಚಿಸಿದ್ದಲ್ಲದೆ ಆಸೇತು ಹಿಮಾಚಲ ಪರ್ಯಂತ ಸಂಚಾರ ಮಾಡಿ ಬೌದ್ಧ ಪ್ರತಿಪಕ್ಷವನ್ನು ಸ್ಥಾಪಿಸಲು ಸಮರ್ಥರಾದರು. ಅನಂತರ ರಾಮಾನುಜಾಚಾರ್ಯರು (ಕ್ರಿ .ಶ. 1017 - 1137) ಅವತರಿಸಿ ಪರಮಾತ್ಮನಿಗೂ ಪ್ರಪಂಚಕ್ಕೂ ಶರೀರಾತ್ಮ ಸಂಬಂಧವನ್ನು ವಿವೇಚಿಸುವ ಮಾರ್ಗದಲ್ಲಿ ಸಮಾಜ ಸುಧಾರಕರೂ ಆಗಿ ವಿಶಿಷ್ಟಾದೈತ ಸಿದ್ಧಾಂತವನ್ನು ಪ್ರತಿಪಾದಿಸಿದರು. ಇವರಿಬ್ಬರಾದ ಮೇಲೆ ವೇದಾಂತ ಪ್ರಪಂಚದಲ್ಲಿ ಮುಖ್ಯವಾಗಿ ಕಾಣಿಸಿಕೊಂಡ ಮಧ್ವಾಚಾರ್ಯರು (ಕ್ರಿ .ಶ. 1238 - 1317) ಬೃಹತ್ತರ ತತ್ತ್ವ ಜಾಲವನ್ನೇ ಬಿಡಿಸಬೇಕಾಯಿತು. ಪರಂಪರೆಯಿಂದ ಬಂದಂತಹ ಬಹು ದರ್ಶನಗಳ ಹಿನ್ನಲೆಯಲ್ಲಿ ಶ್ರುತಿ ಸ್ಮೃತಿ ಇತಿಹಾಸಗಳ ಸ್ವತಂತ್ರ ಸಮನ್ವಯವನ್ನು ಸಾಧಿಸಿದ್ದು ಮಧ್ಯಾಚಾರ್ಯರ ವೈಶಿಷ್ಟ್ಯ.

            ಸನಾತನ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಆಚಾರ್ಯತ್ರಯರಲ್ಲಿ ಶಂಕರಾಚಾರ್ಯರು ಮೊದಲಿಗರು (ಆದಿ ಶಂಕರರು). "ಅಹಂ ಬ್ರಹ್ಮಾಸ್ಮಿ" (ನನ್ನೊಳಿರುವ ಆತ್ಮವೇ ಪರಂಬ್ರಹ್ಮ), "ತತ್ ತ್ವಮ್ ಅಸಿ" (ನೀನು ಅದೇ ಆತ್ಮದಿಂದ ಆಗಿರುವೆ) ಎಂಬುದು ಅದ್ವೈತ ತತ್ವದ ಮೂಲ ಮಂತ್ರ. ಇದಲ್ಲದೇ ಆದಿ ಶಂಕರಾಚಾರ್ಯರು ಪರಮಾತ್ಮ, ಅಂದರೆ "ಆತ್ಮ", ಅದು ಮಾತ್ರ ಸತ್ಯ; ಈ ಜಗತ್ತಿ ನಲ್ಲಿ ಮಿಕ್ಕೆಲ್ಲವೂ ಮಿಥ್ಯ ಹಾಗೂ "ಸರ್ವಂ ಬ್ರಹ್ಮಮಯಂ ಜಗತ್" (ಈ ಜಗತ್ತಿನಲ್ಲಿ ಎಲ್ಲವೂ ಪರಮಾತ್ಮನಿಂದಲೇ ಆವರಿಸಲ್ಪಟ್ಟಿದೆ) ಎಂಬುದಾಗಿ ಜಗತ್ತಿಗೆ ಸಾರಿದರು. ಪ್ರಥಮ ಹಂತವು ವಿಗ್ರಹಾರಾಧನೆ; ಮುಂದಿನದು ಜಪ ಮತ್ತು ಸ್ತೋತ್ರ ಧ್ಯಾನಗಳಿಂದ ಕೂಡಿರುತ್ತದೆ; ಅದಕ್ಕಿಂತ ಮೇಲಿನದು ಮಾನಸಿಕ ಪೂಜೆ, "ಸೋಹಂ” ಎಂದು ತಿಳಿಯುವುದೇ ಅತ್ಯುತ್ತಮವಾದ ಪೂಜೆ. ಕರ್ಮಯೋಗ, ಭಕ್ತಿಯೋಗ, ಧ್ಯಾನಯೋಗಗಳ ಮೂಲಕ ಜ್ಞಾನರ್ಜನೆಗಿರುವ ಅಡ್ಡಿಗಳೆಲ್ಲವೂ  ನಿರ್ಮೂಲವಾದಮೇಲೆ, ಆತ್ಮಾನ್ವೇಷಣೆಯ ಮಾರ್ಗವನ್ನು ಯಶಸ್ವಿಯಾಗಿ ಅನುಸರಿಸಿದಮೇಲೆ ಅದ್ವೈತವಾದ ಆತ್ಮದ ಜ್ಞಾನವು ಉದಯವಾಗುತ್ತದೆ. ಜ್ಞಾನದ ಮೂಲಕ ಅಜ್ಞಾನವು ನಾಶವಾದೊಡನೆಯೇ ಆತ್ಮವು ತನ್ನಷ್ಟಕ್ಕೆ ತಾನೇ ಗೋಚರವಾಗುತ್ತದೆ. ಇದನ್ನೇ ಮೋಕ್ಷ ಎಂದು ಕರೆಯುತ್ತಾರೆ. ಅಜ್ಞಾನವನ್ನು ನಾಶಮಾಡಿದೊಡನೆಯೇ ಜ್ಞಾನದ ಮೂಲಕ ಮೋಕ್ಷ ಸಿದ್ಧಿಯಾಗುತ್ತದೆ ಎಂದಿದ್ದಾರೆ.

“ಜ್ಯೇಷ್ಠಶ್ಚ ಪ್ರಾಣಃ | ಶುಕ್ರ ನಿಶೇಕಕಾಲಾದಾರಭ್ಯ ತಸ್ಯ ವೃತ್ತಿಲಾಭಾತ್‌ ॥ ನ ಚೇತ್‌ ತಸ್ಯ  ತದಾನೀಂ ವೃತ್ತಿಲಾಭಃ ಸ್ಯಾತ್‌ । ಯೋನೌ ನಿಷಿಕ್ತಂ ಶುಕ್ರಂ | ಪೂಯೇತ ನ ಸಂಭವೇತ್‌ ವಾ॥“

ಶಂಕರಾಚಾರ್ಯರ ಬ್ರಹ್ಮಸೂತ್ರ ಭಾಷ್ಯ

ಭಾವಾರ್ಥ:- ಮುಖ್ಯ ಪ್ರಾಣ ಉಳಿದೆಲ್ಲ ಪ್ರಾಣಕ್ಕಿಂತ ಜ್ಯೇಷ್ಠವಾದದ್ದು. ಜ್ಯೇಷ್ಠ ಎಂದರೆ ಉಳಿದ ಪ್ರಾಣಗಳಿಗೆ ಹಿರಿಯಣ್ಣ, ಮೊದಲೇ ಬಂದಿದ್ದು ಎಂದರ್ಥ. ಏಕೆಂದರೆ ಈ ಜೀವಾತ್ಮ ಮೊಟ್ಟಮೊದಲು ತಾಯಿಯ ಗರ್ಭಕ್ಕೆ ಬಂದಾಗಲೇ ಪ್ರಾಣ ಇದ್ದಾನೆ. ಉಳಿದ ಅಪಾನ, ವ್ಯಾನ, ಉದಾನ, ಸಮಾನಗಳು, ವಾಕ್‌, ಪಾಣಿ, ಪಾದ, ಪಾಯು, ಉಪಸ್ಥಗಳು, ಶ್ರೋತ್ರ, ಚಕ್ಷು, ರಸನ, ಜಿಹ್ವೆ, ಘ್ರಾಣಗಳು ಇವೆಲ್ಲ ಆನಂತರ ವ್ಯಕ್ತವಾಗಿ ಬಂದವರು.

            ಆತ್ಮಜ್ಞಾನವನ್ನು ಪಡೆಯಲು ಸನ್ಯಾಸಾಶ್ರಮವೆ ಹೆಚ್ಚು ಅನುಕೂಲ ಎಂದು ಅವರು ಒತ್ತಿ ಒತ್ತಿ ಹೇಳುತ್ತಾರೆ. ಇದರಿಂದಾಗಿ "ಶಂಕರರು ಸನ್ಯಾಸದ ಪಕ್ಚಪಾತಿಗಳು' ಎಂಬ ಟೀಕೆಗೂ ಅವರು ಗುರಿಯಾಗಬೇಕಾಯಿತು. ಹದಿನೇಳನೆಯ ಶತಮಾನದ ಕೊನೆಯ ಭಾಗದಲ್ಲಿದ್ದ ಮಹಾಲಿಂಗರಂಗ ಕವಿಯಅನುಭವಾಮೃತ''ವು ಕನ್ನಡದಲ್ಲಿ ಬಂದ ಅದ್ವೈತದರ್ಶನದ ಅನುಪಮ ಕಾವ್ಯವಾಗಿದೆ. ಅನುಭವಾಮೃತದಲ್ಲಿ ಹೀಗಿದೆ “ದೇಹವೇ ದೇವಾಲಯ. ದೇಹಿಯಾದ ಜೀವನೇ ದೇವರು. ಮೋಹವೆಂಬ ನಿರ್ಮಾಲ್ಯವನ್ನು ತೆಗೆದು ಸ್ವಯಂ ಜ್ಯೋತಿಸ್ವರೂಪನಾದ (ಪರಬ್ರಹ್ಮವೇ) ನಾನೆನ್ನುವದೇ ಪೂಜೆ, ದೇಹವು ಪ್ರಾರಬ್ಧವಶದಿಂದ ಮಾಡುತ್ತಿರುವ ಕರ್ಮಗಳೇ ಉಪಚಾರಗಳು”.  (ಅದ್ವೈತಿಗಳು ಇಂದಿಗೂ “ದೇಹೋ ದೇವಾಲಯ ಪ್ರೋಕ್ತೋ ದೇವೋ ಜೀವಃ ಸದಾಶಿವಃ” ಎಂದು ನಿತ್ಯಕರ್ಮದಲ್ಲಿ ಪಠಿಸುವದನ್ನು ಕಾಣಬಹುದು.)

            ಆದಿಶಂಕರರ ಬರುವ ಮುನ್ನ ಭಾರತದ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಗೊಂದಲದ ಪರಿಸ್ಥಿತಿ ತಲೆದೋರಿತ್ತು. ವೇದ, ಉಪನಿಷತ್‌, ಮಹಾಕಾವ್ಯ, ಪುರಾಣ ಮತ್ತು ಸೂತ್ರಗಳ ಮೇಲೆ ಆಧಾರಿತ ಸನಾತನ ಧರ್ಮವನ್ನು, ಆಗ ಪ್ರಚಲಿತವಿದ್ದ ನಾಸ್ತಿಕವಾದ, ಆಜ್ಞೇಯತಾವಾದ ಮತ್ತು ಶೂನ್ಯವಾದಗಳು ಪ್ರತಿಭಟಿಸಿದವು. ತಂತ್ರಪೂಜೆ ವ್ಯಾಪಕವಾಗಿ ಪಸರಿಸಿತ್ತು. ಶೈವ, ಶಾಕ್ತ, ವೈಷ್ಣವ, ಗಾಣಪತ್ಯ ಮುಂತಾದ ತಾಮಸ ತಾಂತ್ರಿಕರ ಪ್ರಭಾವದಿಂದಾಗಿ ಭಾರತೀಯ ಸನಾತನ ಧರ್ಮಕ್ಕೆ ಬಲವಾದ ಏಟು ಬಿದ್ದಂತಾಯಿತು. ಶಿವ, ದೇವಿ, ವಿಷ್ಣು, ಸೂರ್ಯ, ಗಣಪತಿ ಮತ್ತು ಕುಮಾರ ಪೂಜಕರಾದ ಭಿನ್ನಮತೀಯರನ್ನು ಒಂದುಗೂಡಿಸಿದ್ದಕ್ಕಾಗಿ ಶಂಕರರಿಗೆ ಪಣ್ಮತಸ್ಥಾಪನಾಚಾರ್ಯ ಎಂಬ ಬಿರುದು ಅನ್ವರ್ಥವಾಯಿತು. ಸನಾತನ ವೈದಿಕ ಧರ್ಮವನ್ನು ಪುನರುದ್ಧಾರ ಮಾಡಿದ ಶ್ರೇಯಸ್ಸು ಆದಿಶಂಕರರಿಗೆ ಸಲ್ಲುತ್ತದೆ. ಶಂಕರಾಚಾರ್ಯರ ಕಾಲದಲ್ಲಿ ಜೈನ ಹಾಗೂ ಬುದ್ಧ ಧರ್ಮಗಳಷ್ಟೇ

ಪ್ರತಿಸ್ಪರ್ಥಿಗಳಾಗಿರದೇ ಪಂಚರಾತ್ರ, ಪಾಶುಪತ, ಕಾಪಾಲಿಕ ಹಾಗೂ ಗಾಣಪತ್ಯ ಮತ ಇವೇ ಮೊದಲಾದ ಅವೈದಿಕ ಮತಗಳು ಭಾರತದಲ್ಲೆಲ್ಲ ಪಸರಿಸಿದ್ದವು ಎಂಬುದು ಇತಿಹಾಸ ತಜ್ಞರ ಅಭಿಪ್ರಾಯವಾಗಿದೆ.

            ಶ್ರೀ ರಾಮಾನುಜ ಅಥವಾ ರಾಮಾನುಜಾಚಾರ್ಯ  ವೇದಾಂತದ ಪ್ರಸಿದ್ಧ ಸಿದ್ಧಾಂತಗಳಲ್ಲೊಂದಾದ ವಿಶಿಷ್ಟಾದ್ವೈತದ ಪ್ರತಿಪಾದಕರಲ್ಲಿ ಪ್ರಮುಖರು.  ನಿಮ್ಮ ಅಹಂಕಾರವನ್ನು ತೊಡೆದುಹಾಕಿ. ಎಲ್ಲಾ ಜೀವಿಗಳನ್ನು ದೇವರ ಸೇವೆಯಾಗಿ ಸೇವಿಸಿ. ಭಗವಂತನ ವಿಶ್ವರೂಪವಾದ ಸಮಾಜಕ್ಕೆ ಸೇವೆ ಮಾಡಿ. ಯಾರೂ ತಪ್ಪಿತಸ್ಥರಲ್ಲ. ಯಾರನ್ನೂ ಅವಮಾನಿಸಬೇಡಿ. ಅತ್ಯುನ್ನತ ಪ್ರಾಮುಖ್ಯತೆಯೆಂದರೆ ಮನಸ್ಸು ಮತ್ತು ಕಾರ್ಯದ ಶುದ್ಧತೆ, ಎಂಬುದಾಗಿ ಜಗತ್ತಿಗೆ ಸಾರಿದರು. ಪರಬ್ರಹ್ಮನಿಂದ ಈ ಲೋಕಕ್ಕೆ ಬಂದ ಜೀವಾತ್ಮನು ಆ ಪರತತ್ತ್ವವನ್ನು ಹೇಗೆ ಸಾಕ್ಷಾತ್ಯರಿಸಿಕೊಂಡು ಮೋಕ್ಷವನ್ನು ಹೊಂದಬಹುದು ಎಂಬುದು ರಾಮಾನುಜರ ಶ್ರೀಭಾಷ್ಯದಲ್ಲಿ ವಿವರಿಸಲ್ಪಟ್ಟಿದೆ. ಇದರಲ್ಲಿ ಉಪನಿಷತ್ತುಗಳ ವ್ಯಾಖ್ಯಾನವೂ ಸಾಕಷ್ಟು ಪ್ರಮಾಣ ದಲ್ಲಿ ಬಂದಿದೆ. ಪರಬ್ರಹ್ಮನ ಪ್ರಾಪ್ತಿಗೆ ಭಕ್ತಿಯೇ ಸಾಧನ ಎಂಬ ಗ್ರಂಥದ ಶಾಸ್ತ್ರಾರ್ಥವೆಲ್ಲಾ ಈ ಶ್ರೀಭಾಷ್ಯದ ಆರಂಭದ ಮಂಗಳ ಶ್ಲೋಕದಲ್ಲಿಯೇ ಅಡಗಿದೆ. "ಅಖಿಲಭುವನಜನ್ಮ ಸ್ಥೇಮ ಭಂಗಾದಿಲೀಲೇ ವಿನತ ವಿವಿಧ ಭೂತವ್ರಾತ ರಕ್ಷೈಕ ದೀಕ್ಷೇ | ಶ್ರುತಿಶಿರಸಿ ವಿದೀಪ್ತೇ ಬ್ರಹ್ಮಣಿ ಶ್ರೀನಿವಾಸೇ ಭವತು ಮಮ ಪರಸ್ಮಿನ್‌ ಶೇಮುಷೀ ಭಕ್ತಿರೂಪಾ ॥ (ಅಖಿಲ ಜಗತ್ತಿನ ಸೃಷ್ಟಿ ಸ್ಥಿತಿ ಸಂಹಾರವೇ ಮೊದಲಾದುವು ಯಾವನಿಗೆ ಲೀಲೆಯಾಗಿವೆಯೋ, ಶರಣಾಗತರಾದ ವಿವಿಧ ಪ್ರಾಣಿ ಸಮೂಹಗಳ ರಕ್ಷಣೆಯೊಂದೇ ಯಾವನಿಗೆ ದೀಕ್ಷೆಯಾಗಿದೆಯೋ, ಶೃತಿಗಳಿಗೆ ಶಿರಸ್ಸು ಎನಿಸಿದ ಉಪನಿಷತ್ತುಗಳಲ್ಲಿ ಯಾವನು ವಿಶೇಷವಾಗಿ ಪ್ರತಿಪಾದಿತನಾಗಿರುವನೋ, ಆ ಪರಬ್ರಹ್ಮನಾದ ಶ್ರೀನಿವಾಸನಲ್ಲಿ ನನಗೆ ಭಕ್ತಿರೂಪವಾದ ಜ್ಞಾನ ಉಂಟಾಗಲಿ).

            ಶ್ರೀ ವೈಷ್ಣವ ಮತ ಆಥವಾ ರಾಮಾನುಜ ಸಿದ್ಧಾಂತಕ್ಕೆ ಪ್ರಪತ್ತಿಯೇ ಅಡಿಗಲ್ಲು. ತನ್ನನ್ನು ರಕ್ಷಿಸಿಕೊಳ್ಳಲಾರದ ಜೀವನು ತನ್ನ ಅಲ್ಪತ್ವ, ಮತ್ತು ಅಶಕ್ತಿಗಳನ್ನು ಮನಗಂಡು. ತನ್ನ ರಕ್ಷಣೆಯ ಹೊಣೆಯನ್ನು ಸರ್ವರಕ್ಷಕನಾದ ಭಗವಂತನ ಮೇಲೆ ಹಾಕಿ ನಶ್ಚಿಂತನಾಗಿರುವುದು. ಭಗವಂತನ ಉಪಾಸನೆ ಮಾಡಲು ಶಾಸ್ತ್ರಾಧಿಕಾರವಿಲ್ಲದವರು, ಶಾಸ್ತ್ರಜ್ಞಾನ ವಿಲ್ಲದವರು, ಭಕ್ತಿ ಯೋಗವನ್ನು ಅನುಷ್ಠಿಸಲು ಅಶಕ್ತರಾದವರು. ಭಗವತ್ಪ್ರಾಪ್ತಿಗೆ ಆಗುವ ವಿಳಂಬವನ್ನು ಸಹಿಸದ ಆತುರಗಾರರು ಇವರೆಲ್ಲ ಪ್ರಪತ್ತಿಮಾಡಲು ಅಧಿಕಾರ ಪಡೆದವರು. ಪಾಪದ ನಾಶಕ್ಕೆ, ಸಂಸಾರ ಬಂಧನದಿಂದ ಬಿಡುಗಡೆಗೆ, ಮತ್ತು ಮೋಕ್ಷ ಸಾಧನೆಗೆ ಅವಶ್ಯವಾದ ವೇದೋಪನಿಷತ್ತುಗಳನ್ನು ಅಧ್ಯಯನ ಮಾಡಲಾರದ ಅವಿದ್ಯಾವಂತರು, ಹಾಗೂ ಅಧ್ಯಯನ ಮಾಡಕೂಡದು ಎನ್ನುವ ಕೀಳು ಕುಲದವರೆನಿಸಿದವರು, ಶಾಸ್ತ್ರೋಕ್ತವಾದ ಕರ್ತವ್ಯ ಕರ್ಮಗಳನ್ನು ಮಾಡಲಾರದ ದುರ್ಬಲರು, ಸ್ತ್ರೀಯರು, ಹೆಚ್ಚು ಕಾಲ ತಾಳ್ಮೆಯಿಂದ ಕಾಯಲಾರದವರು, ಈ ಎಲ್ಲ ಬಗೆಯ ಜನರೂ ಪರಮಾತ್ಮನೇ ಸಾಧನವೆಂದು ಭಾವಿಸಿ ಆತನೆಡೆಗೇ ತಮ್ಮ ಮನಸ್ಸನ್ನು ತಿರುಗಿಸಬೇಕು. ಎಲ್ಲ ವ್ಯಕ್ತಿ ವಸ್ತುಗಳೂ ಭಗವಂತನ ಆಳ್ವಿಕೆಗೊಳಪಟ್ಟು ಅವನ ನಿಯಮಗಳಿಗೆ ಅಧೀನವಾಗಿವೆ ಎಂದು ನಂಬಿ ಅವನಲ್ಲಿ ಪೂರ್ಣವಾಗಿ ಆತ್ಮ ಸಮರ್ಪಣೆಮಾಡಿ ಶರಣು ಹೋಗಬೇಕು. ಇದು ರಾಮಾನುಜರ ಬೋಧನಾ ಸಾರ.

            ಮಧ್ವಚಾರ್ಯರ ಬೋಧನೆಗಳು ಆತ್ಮ (ವೈಯಕ್ತಿಕ ಆತ್ಮ, ಸ್ವಯಂ) ಮತ್ತು ಬ್ರಹ್ಮನ (ಅಂತಿಮ ವಾಸ್ತವ, ದೇವರು ವಿಷ್ಣು) ನಡುವೆ ಮೂಲಭೂತ ವ್ಯತ್ಯಾಸವಿದೆ ಎಂಬ ಆಧಾರದ ಮೇಲೆ ನಿರ್ಮಿಸಲಾಗಿದೆ, ಇವು ಎರಡು ವಿಭಿನ್ನ ಬದಲಾಗದ ಸತ್ಯಗಳಾಗಿವೆ, ವೈಯಕ್ತಿಕ ಆತ್ಮವು ಬ್ರಹ್ಮನ ಮೇಲೆ ಅವಲಂಬಿತವಾಗಿದೆ, ಎಂದಿಗೂ ಒಂದೇ ಆಗಿರುವುದಿಲ್ಲ, ಎಂಬುದಾಗಿ ಜಗತ್ತಿಗೆ ಸಾರಿದರು. ವೇದಗಳ ಅರ್ಥ ವಿಸ್ತಾರದ ಬಗ್ಗೆ ಶ್ರೀ ಮಧ್ವಚಾರ್ಯರು ನೀಡಿದ ವಿವರ ವಾಜ್ಮಯ ಪ್ರಪಂಚದಲ್ಲೇ ಅಪೂರ್ವ. ಸ್ಕಂದಪುರಾಣದ ಆಧಾರವನ್ನಿತ್ತು ಅವರು ಸಾರಿದರು. ವೇದಗಳಿಗೆ ಅತಿ ಕಡಿಮೆಯೆಂದರೂ ಮೂರು ಅರ್ಥಗಳು ಮಹಾಭಾರತಕ್ಕೆ ಹತ್ತು ಅರ್ಥಗಳು ಮತ್ತು ವಿಷ್ಣು ಸಹಸ್ರ ನಾಮದ ಪ್ರತಿ ನಾಮಕ್ಕೂ ನೂರು ಅರ್ಥ ಎಂದು ಸಂಸ್ಕೃತ ಅನುವಾದಕ್ಕೆ  ಹೊಸ ತಿರುವು ಕೊಟ್ಟವರು.

            ವೇದೋಕ್ತ ವೈಷ್ಣವ ಸಂಪ್ರದಾಯವನ್ನು ಪ್ರಗತಿ ಪಥದಲ್ಲಿ ಕೊಂಡೊಯ್ಯಲು ಮಧ್ವಾಚಾರ್ಯರು ಅನುಸರಿಸಿದ ಮಾರ್ಗ ವಂತೂ ವಿಶಿಷ್ಟವಾದುದು. ಮುಸಲ್ಮಾನರ ದಾಳಿಯು ಬಿರುಗಾಳಿ ಯಂತೆ ಬೀಸತೊಡಗಿದ್ದ ಕಾಲದಲ್ಲಿ ಉಡುಪಿಯಿಂದ ಬದರಿಯತನಕ ಎರಡು ಬಾರಿ ನಾನಾ ರಾಜ್ಯಗಳಲ್ಲಿ ಹಾದು ವಾಯುವೇಗದಲ್ಲಿ ಸಂಚರಿಸಿದಂಥ ವೀರ ಸನ್ಯಾಸಿಗಳು. ಇವರು ಉತ್ತರ ಭಾರತದಲ್ಲಿ ಕೋಮುವಾರು ಆಂದೋಲನದಿಂದ ಎಷ್ಟೋ ಹಿಂದೂ ವಿಶ್ವವಿದ್ಯಾನಿಲಯಗಳು ನೆಲಸಮವಾದದ್ದನ್ನು ಆಚಾರ್ಯರು ಪ್ರತ್ಯಕ್ಷವಾಗಿ ಕಂಡಿರಲು ಸಾಧ್ಯವಿದೆ. ಇಂಥ ಪರಿಸ್ಥಿತಿಯಲ್ಲೂ ವೇದವ್ಯಾಸರ ವಿಸ್ತಾರ ವಾಙ್ಮಯದ ನಾನಾಬಗೆಯ ವಿಧ ವಿಧ ಪ್ರತಿಗಳನ್ನು ದೇಶಕಾಲಾನುಗುಣವಾಗಿ ಸಂಗ್ರಹಿಸಿ ಶುದ್ಧ ಸಂಪ್ರದಾಯವನ್ನು ದಿಟ್ಟತನದಿಂದ ಘೋಷಿಸಿದ ಕೀರ್ತಿ ಆಚಾರ್ಯರಿಗೆ ಸಲ್ಲುತ್ತದೆ.

            ಆತ್ಮನನ್ನು ಇಂದ್ರಿಯಗಳು ಅರಿಯಲಾರವು. ಊಹೆಯಿಂದಲೂ ಆತ್ಮನನ್ನು ತಿಳಿಯಲಾಗುವುದಿಲ್ಲ. ವೇದಗಳಿಂದ ಮಾತ್ರವೇ ಅವನನ್ನು ತಿಳಿಯಲು ಸಾಧ್ಯ. ಆದುದರಿಂದ ವೇದವು “ವೇದ” ಎನ್ನಿಸಿತು ಎಂಬ ಅಭಿಪ್ರಾಯವನ್ನು ಶ್ರೀಮಧ್ವಾಚಾರ್ಯರು ಹೇಳಿರುತ್ತಾರೆ.

            ಮಾಧ್ವರಲ್ಲಿ ವ್ಯಾಸರಾಯರಿಂದ ಪ್ರಾರಂಭವಾಗಿ ಅನೇಕ ಮಹನೀಯರು ಹರಿ ಸರ್ವೋತ್ತಮ ವಾಯು ಜೀವೋತ್ತಮ (ಹರಿ ಎಂದರೆ ಸಂಸ್ಕೃತ ಅಕ್ಷರ ಅರ್ಥದಲ್ಲಿ 'ಚಲಿಸುವ ವೈದ್ಯ') ಎಂದು ಮೂಲತತ್ವಕ್ಕೆ ಬಂದರು, ವಾದಿರಾಜರು ಸುಮಾರು ನೂರಿಪ್ಪತ್ತು ವರ್ಷಗಳ ಸುದೀರ್ಘ ಕಾಲ ಬದುಕಿ ನ್ಯಾಯ, ವೇದಾಂತ, ಕಾವ್ಯ ಕೀರ್ತನೆಗಳನ್ನು ರಚಿಸಿ ವೇದಾಂತ ಧರ್ಮವನ್ನು ಪ್ರಜ್ವಲಗೊಳಿಸಿದರು. ಶ್ರೀ ವಾದಿರಾಜರ ಸ್ವಾಮಿಗಳು ಸಶರೀರವಾಗಿ ಬೃಂದಾವನವನ್ನು ಪ್ರವೇಶ ಮಾಡಿದವರಲ್ಲಿ ಮೊದಲಿಗರು. ನಂತರದವರು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳು. ಪ್ರಾಣನಾಥ ವಾಯು ದೇವರಿಗೆ ಪ್ರಾಮುಖ್ಯತೆ ಕೊಟ್ಟ ಶ್ರೀ ರಾಘವೇಂದ್ರ ಸ್ವಾಮಿಗಳು, ತಮ್ಮ ತಪೋ ಬಲದಿಂದ ಮಾಡಿದ ಸೇವೆ, ಇಂದಿಗೂ ಅನನ್ಯ, ಇನ್ನೂ ಅನೇಕ ಮಹನೀಯರು ಈಗಲೂ ತಮಗೆ ಧ್ಯಾನದ ಮೂಲ ಸ್ವರೂಪ ಗೊತ್ತಿದ್ದೋ ಗೊತ್ತಿಲ್ಲದೆಯೋ ಹಿಂದು ಧರ್ಮಕ್ಕೆ ಬೆನ್ನೆಲುಬಾಗಿ ನಿಂತಿರುವ ಸಮಸ್ತರನ್ನು ಈ ಮೂಲಕ ಶಿರಸಾ ನಮಿಸಿ ನನ್ನ ಈ ಪುಟ್ಟ ಪ್ರಯತ್ನವನ್ನು ಮುಂದಿಡುತ್ತಿದ್ದೇನೆ.

ಶ್ರೀಧರ ಬಾಬು ಎನ್

ಓದುವ ಮುನ್ನ ನಮ್ಮ ಅರಿವಿಗೆ

            ವೇದಗಳು ಮಾನವನ ಆರೋಗ್ಯ ಮತ್ತು ಜ್ಞಾನ ಅಭಿವೃದ್ದಿಗೆ ಬಹಳ ಉಪಯುಕ್ತ ರಹಸ್ಯಗಳನ್ನು ತಿಳಿಸಿವೆ, ಇಂತಹ ರಹಸ್ಯಗಳನ್ನು ಸಾಮಾನ್ಯ ಜನರಿಗೆ ತಿಳಿಸಿದ/ತಿಳಿಸಲು ಪ್ರಯತ್ನಿಸಿದ ಮೊಟ್ಟಮೊದಲ ಋಷಿ ವ್ಯಾಸ ಮಹರ್ಶಿಗಳು. ವ್ಯಾಸರ ತಂದೆ ಪರಾಷರರು ತನ್ನ ಮಗನಿಗೆ ಚಿಕ್ಕ ವಯಸ್ಸಿನಲ್ಲಿಯೇ ಕುಂಡಲಿನಿ ಪ್ರಾಣಾಯಾಮದ ರಹಸ್ಯವನ್ನು ತಿಳಿಸಿರುವ ಬಗ್ಗೆ ಹಲವು ಗ್ರಂಥಗಳಲ್ಲಿ ಉಲ್ಲೇಕವಿದೆ,  ಅದನ್ನು  ವ್ಯಾಸರು ಅನುಷ್ಟಾನಕ್ಕೆ ತಂದು ಉತ್ತಮ ಆರೋಗ್ಯ ಮತ್ತು ಜ್ಞಾನವನ್ನು ಪಡೆದು, ಮೊದಲಿಗೆ ಇದ್ದ ಮೂರು ವೇದಗಳಿಗೆ ನಾಲ್ಕನೇ ವೇದ ಅಥರ್ವ ವೇದ ಮತ್ತು ಪಂಚಮ ವೇದವಾದ ಪುರಾಣಗಳನ್ನು ರಚಿಸಿದರು ಎಂದು ಹೇಳಲಾಗುತ್ತದೆ. ಅನೇಕ ಮಹರ್ಶಿಗಳು ಸತ್ಯವನ್ನು ಮತ್ತೆ ಮತ್ತೆ ತಿಳಿಸುವ ಅವರ ಅನುಭವದ ಕಾವ್ಯ, ಕಥೆ, ಶ್ಲೋಕ ಇತ್ಯಾದಿ ಬರೆದರು. ಆದರೆ ಅದು ಕಾಲಾನುಕ್ರಮದಲ್ಲಿ ಪರಕೀಯರ  (ಅಬ್ರಹಾಮಿಕ್ ಮತಗಳವರ) ಕ್ರೌರ್ಯ ಕಾರಣದಿ ಅವರಿಂದ ಸಂಸ್ಕೃತ ಗ್ರಂಥಗಳನ್ನು ದೂರ ಇಡಲು ಪ್ರಯತ್ನಗಳು ನಡೆದವು. ಅಬ್ರಹಾಮಿಕ್ ಮತಗಳವರ ಕ್ರೌರ್ಯ ಮತ್ತು ಈರ್ಷೆಯಿಂದ ಎಸ್ಟೋ ಗ್ರಂಥಗಳು ನಾಶವೂ ಆದವು. 

            ಈ ಬಗ್ಗೆ ಚರಿತ್ರೆ ಗಮನಿಸಿ, ಕ್ರಿ.ಶಿ 52 ರಲ್ಲಿ ಇಂದಿನ ಕೇರಳ ರಾಜ್ಯವಾದ ಮಲಬಾರ್ ಪ್ರದೇಶಕ್ಕೆ ನೌಕಾಯಾನ ಮಾಡಿದ ಥಾಮಸ್ ದಿ ಅಪೊಸ್ತಲರಿಂದ ಕ್ರಿಶ್ಚಿಯನ್ ಧರ್ಮವನ್ನು ಭಾರತೀಯ ಉಪಖಂಡಕ್ಕೆ ಪರಿಚಯಿಸಲಾಯಿತು ಎಂದು ಸೇಂಟ್ ಥಾಮಸ್ ಕ್ರಿಶ್ಚಿಯನ್ನರ ಲಿಖಿತ ದಾಖಲೆಗಳು ಹೇಳುತ್ತವೆ. ಈ ಬಗ್ಗೆ ಕಿಯೋನ್ರಾಡ್ ಎಲ್ಸ್ಟ್ ಬರೆಯುತ್ತಾರೆ, “ದಕ್ಷಿಣ ಭಾರತದಲ್ಲಿ, ಸೇಂಟ್ ಥಾಮಸ್ ಅವರ ಪುರಾಣವು ಅವರ ಜೀವನದೊಂದಿಗೆ ತಪ್ಪಾಗಿ ಸಂಬಂಧಿಸಿದ ಸ್ಥಳಗಳಲ್ಲಿ ದೇವಾಲಯದ ನಾಶದ ಕೆಲವು ನಿದರ್ಶನಗಳಿಗೆ ಹಿನ್ನೆಲೆಯನ್ನು ಒದಗಿಸಿತು ಮತ್ತು ಹುತಾತ್ಮರೆಂದು ಸುಳ್ಳು ಉಲ್ಲೇಖಿಸಲಾಗಿದೆ, ವಿಶೇಷವಾಗಿ ಮದ್ರಾಸ್‌ನ ಮೈಲಾಪುರ್ ಶಿವ ದೇವಾಲಯ ಇಲ್ಲವಾಗಿಸಿ ಅಲ್ಲಿ ಸೇಂಟ್ ಥಾಮಸ್ ಚರ್ಚ್ ಮಾಡಲಾಗಿತ್ತು. ಆ ಸಂದರ್ಭದಲ್ಲಿ, ವಂಚನೆಯ ಅಭಿಯಾನವು ಇನ್ನೂ ಮುಂದುವರೆದು: ಮತಪ್ರಚಾರಕ ಥಾಮಸ್ ಭಾರತಕ್ಕೆ ಬಂದು ಅಸೂಯೆ ಪಟ್ಟ ಬ್ರಾಹ್ಮಣರಿಂದ ಕೊಲ್ಲಲ್ಪಟ್ಟ ಎಂದು ಸುಳ್ಳು ಹಬ್ಬಿಸಲಾಗಿತ್ತು, ಇಂದಿಗೂ, ಕ್ರಿಶ್ಚಿಯನ್ ಬರಹಗಾರರು ಐತಿಹಾಸಿಕ ಸಿಂಧುತ್ವವನ್ನು ಪ್ರತಿಪಾದಿಸುತ್ತಲೇ ಇದ್ದಾರೆ. ಈ ಕಥೆಯು ಜೀಸಸ್ ಯಹೂದಿಗಳಿಂದ ಕೊಲ್ಲಲ್ಪಟ್ಟ ಕಥೆಗೆ ಸಮಾನಾಂತರವಾಗಿದೆ ಮತ್ತು ಇದು ವಿವರವಾಗಿ ಕ್ರಿಶ್ಚಿಯನ್ ಯೆಹೂದ್ಯ ವಿರೋಧಿಯನ್ನು ಹೋಲುವ ಬ್ರಾಹ್ಮಣ ವೈರೂದ್ಯಕ್ಕೆ ವಿಸ್ತಾರವಾದ ಕ್ರಿಶ್ಚಿಯನ್ ಸಿದ್ಧಾಂತದಲ್ಲಿ ವಾದವಾಗಿ ಕಾರ್ಯನಿರ್ವಹಿಸುತ್ತಿದೆ. ಯಾವುದೇ ಸಂದರ್ಭದಲ್ಲಿ, ಇದು ಕ್ರೈಸ್ತರ ವಂಚನೆಯಾಗಿದೆ”. ಇಂತಹ ಸಂದೇಶದಲ್ಲೇ ಅಂದಿನ ಸಂಸ್ಕೃತ ಪಂಡಿತರು ಎನ್ನಿಸಿಕೊಂಡಿದ್ದ ಬ್ರಾಹ್ಮಣ ಸಮುದಾಯದ ಮೇಲಿನ ದ್ವೇಶ ಕಾಣಬಹುದು.    ಕ್ರಿ.ಶ 712 ರಲ್ಲಿ ಮುಹಮ್ಮದ್ ಬಿನ್ ಕಾಸಿಮ್ ಮತ್ತು ಅವನ ಅರೇಬಿಕ್ ಸೈನ್ಯದಿಂದ ಸಿಂಧ್ ಅನ್ನು ವಶಪಡಿಸಿಕೊಳ್ಳುವುದರೊಂದಿಗೆ ಭಾರತೀಯ ಉಪಖಂಡದ ಮುಸ್ಲಿಂ ಆಕ್ರಮಿಸುವಿಕೆ ಪ್ರಾರಂಭವಾಯಿತು. ಅಮೇರಿಕನ್ ಇತಿಹಾಸಕಾರ, ಬರಹಗಾರ ಮತ್ತು ತತ್ವಶಾಸ್ತ್ರಜ್ಞ ವಿಲ್ ಡ್ಯುರಾಂಟ್ ಭಾರತದ ಮುಸ್ಲಿಂ ಆಕ್ರಮಣವನ್ನು ಬಹುಶಃ ಇತಿಹಾಸದಲ್ಲಿ ಅತ್ಯಂತ ರಕ್ತಸಿಕ್ತ ಕಥೆ ಎಂದು ಕರೆಯುತ್ತಾರೆ. ದೇವಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳ ನಾಶವು ಹಿಂದೂ ಶಿಕ್ಷಣದ ವ್ಯಾಪಕ ಕುಸಿತಕ್ಕೆ ಕಾರಣವಾಯಿತು. ಹನ್ನೆರಡರಿಂದ ಹದಿನೆಂಟನೆಯ ಶತಮಾನದವರೆಗಿನ ಅವಧಿಯು ಸನಾತನ ಧರ್ಮಕ್ಕೆ ಕರಾಳ ಕಾಲವಾಗಿತ್ತು. ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕ 1ನೇ ಬುಕ್ಕರಾಯ, ಮುಸ್ಲಿಂ ಆಳ್ವಿಕೆಯಲ್ಲಿ ಹಿನ್ನಡೆ ಅನುಭವಿಸಿದ ಹಿಂದೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳನ್ನು ಪುನರ್ವಸತಿ ಮಾಡಲು ಕ್ರಮಗಳನ್ನು ಕೈಗೊಂಡರು. ಉತ್ತರ ಭಾರತದಲ್ಲಿನ ಹೆಚ್ಚಿನ ದೊಡ್ಡ ದೇವಾಲಯಗಳು ನಾಶವಾಗಿದ್ದವು ಮತ್ತು ಮುಸ್ಲಿಂ ಆಡಳಿತಗಾರರ ಅಡಿಯಲ್ಲಿ ಯಾವುದೇ ದೊಡ್ಡ ದೇವಾಲಯಗಳನ್ನು ನಿರ್ಮಿಸಲಾಗಿರಲಿಲ್ಲ. ಇಸ್ಲಾಂನಲ್ಲಿ ಅನುಮತಿಸದ ಕಾರಣದಿಂದ ಚಿತ್ರಣದಲ್ಲಿಯೂ ಅದರ ಬಗ್ಗೆ ಸುಳಿವು ಇಲ್ಲದಂತಾಯಿತು.  ಸೋಮನಾಥ ದೇವಾಲಯವನ್ನು ಸುಮಾರು 17 ಬಾರಿ ದ್ವಂಸಗೊಳಿಸಲಾಗಿತ್ತು ಮತ್ತು ಪುನರುತ್ಥಾನಗೊಳಿಸಲಾಗಿತ್ತು, ಅಂತಹ ಹಿಂಸಾಚಾರ ಮತ್ತು ಆಕ್ರಮಣವನ್ನು ಎದುರಿಸಿದ ಹಿಂದೂಗಳ ಸರ್ವ ರೀತಿಯ ದಮನವೂ ಆಯಿತು. ಸಂಸ್ಕೃತ ಮತ್ತು ಹಿಂದೂ ತತ್ತ್ವಶಾಸ್ತ್ರದ ಸಂಶೋಧನೆಗಳು ತುಂಬಾ ತೊಂದರೆ ಎದುರಿಸುತ್ತಿದ್ದರೂ. ಸಂಸ್ಕೃತವನ್ನು ಆಧರಿಸಿದ ಪ್ರಾದೇಶಿಕ ಭಾಷೆಗಳು ಮತ್ತು ಬಹಳಷ್ಟು ವೇದಾಂತ ಸಾಹಿತ್ಯವನ್ನು 12 ರಿಂದ 15 ನೇ ಶತಮಾನದ ನಡುವೆ ಕೆಲವು ಇತರೆ ಭಾಷೆಗಳಿಗೆ ಅನುವಾದಿಸಲಾಗಿದೆ ಎಂದು ಹೇಳಲಾಗುತ್ತದೆ.

            ಉಲುಘ್ ಖಾನ್ 1323 ರಲ್ಲಿ ಶ್ರೀರಂಗಂ ಅನ್ನು ಆಕ್ರಮಿಸಿದ್ದನು ಮತ್ತು ಕುಖ್ಯಾತ ಕ್ರೂರ ಕೃತ್ಯದಲ್ಲಿ 12000 ನಿರಾಯುಧ ತಪಸ್ವಿಗಳನ್ನು ಕೊಂದನು. ಔರಂಗಜೇಬ್ 1669 ರಲ್ಲಿ ತನ್ನ ಎಲ್ಲಾ ಪ್ರಾಂತ್ಯಗಳ ಗವರ್ನರ್ಗಳಿಗೆ ಆದೇಶಗಳನ್ನು ಹೊರಡಿಸಿದನು: ಸ್ವಇಚ್ಛೆಯ ಕೈಯಿಂದ ಮುಸ್ಲಿಮೇತರರ ಶಾಲೆಗಳು ಮತ್ತು ದೇವಾಲಯಗಳನ್ನು ನಾಶಮಾಡಲು ಮತ್ತು ವಿಗ್ರಹಾರಾಧನೆಯ ವಿಧಗಳ ಬೋಧನೆ ಮತ್ತು ಅಭ್ಯಾಸವನ್ನು ಸಂಪೂರ್ಣವಾಗಿ ನಿಲ್ಲಿಸಲು ಅವರಿಗೆ ಕಟ್ಟುನಿಟ್ಟಾಗಿ ಆದೇಶಿಸಿದ್ದನು.  ನಳಂದಾ ಸೇರಿದಂತೆ ಎಲ್ಲಾ ಪ್ರಾಚೀನ ಭಾರತೀಯ ವಿಶ್ವವಿದ್ಯಾನಿಲಯಗಳು ವೇದ ಕಲಿಕೆಯ ಅತ್ಯಂತ ಔಪಚಾರಿಕ ವಿಧಾನಗಳನ್ನು ಅನುಸರಿಸಿದವು. ವಿಶ್ವವಿದ್ಯಾನಿಲಯ ಶಿಕ್ಷಣವನ್ನು ಪ್ರೋತ್ಸಾಹಿಸಿದವರು ಗುಪ್ತರು, ನಳಂದ ವಿಶ್ವವಿದ್ಯಾಲಯದ ಸ್ಥಾಪನೆಗೆ ಕಾರಣರಾದರು. ನಳಂದ ವಿಶ್ವವಿದ್ಯಾಲಯವು ವಸತಿಗೃಹವಾಗಿತ್ತು ಕಲಿಕೆಯ ಆಸನ ಮತ್ತು ಕ್ಯಾಂಪಸ್‌ನಲ್ಲಿ 10 ದೇವಾಲಯಗಳು, ತರಗತಿ ಕೊಠಡಿಗಳು, ಧ್ಯಾನ ಮಂದಿರಗಳು, ಸರೋವರಗಳು ಮತ್ತು ಉದ್ಯಾನವನಗಳು ಸೇರಿದಂತೆ ಮಠಗಳು, ವಸತಿ ನಿಲಯಗಳು ಇತ್ಯಾದಿ ಎಂಟು ಕಾಂಪೌಂಡ್‌ಗಳಲ್ಲಿ ಹರಡಿತ್ತು. ವಿಶ್ವವಿದ್ಯಾನಿಲಯವು 10,000 ವಿದ್ಯಾರ್ಥಿಗಳು ಮತ್ತು 2,000 ಶಿಕ್ಷಕರಿಗೆ ಅವಕಾಶ ಕಲ್ಪಿಸಿತ್ತು.

ಕ್ರಿ.ಶ 1193 ರಲ್ಲಿ ಭಕ್ತಿಯಾರ್ ಖಿಲ್ಜಿ ನೇತೃತ್ವದಲ್ಲಿ ಮಾಮ್ಲುಕ್ಸ್ ಎಂದು ಕರೆಯಲ್ಪಡುವ ಟರ್ಕಿಶ್ ಮುಸ್ಲಿಂ ಆಕ್ರಮಣಕಾರರಿಂದ ನಳಂದವನ್ನು ಲೂಟಿ ಮಾಡಿ ನಾಶಪಡಿಸಲಾಯಿತು. ನಳಂದ ವಿಶ್ವವಿದ್ಯಾನಿಲಯದ ಮಹಾನ್ ಗ್ರಂಥಾಲಯವು ಎಷ್ಟು ವಿಸ್ತಾರವಾಗಿತ್ತೆಂದರೆ, ಅದು 90 ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಹೊಂದಿತ್ತು ಎಂದು ಹೇಳಲಾಗಿದೆ. ಸಾಂಪ್ರದಾಯಿಕ ಟಿಬೆಟಿಯನ್ ಮೂಲಗಳ ಪ್ರಕಾರ, ನಳಂದಾ ವಿಶ್ವವಿದ್ಯಾನಿಲಯದಲ್ಲಿನ ಗ್ರಂಥಾಲಯವು ಮೂರು ದೊಡ್ಡ ಬಹುಮಹಡಿ ಕಟ್ಟಡಗಳಲ್ಲಿ ಹರಡಿತ್ತು. ಈ ಕಟ್ಟಡಗಳಲ್ಲಿ ಒಂದಾದ ಒಂಬತ್ತು ಮಹಡಿಗಳು ಅತ್ಯಂತ ಪವಿತ್ರವಾದ ಪುಸ್ತಕಗಳನ್ನು ಹೊಂದಿದ್ದವು. ದಾಳಿಕೋರರು ಕಟ್ಟಡಗಳಿಗೆ ಬೆಂಕಿ ಹಚ್ಚಿದ ನಂತರ ಗ್ರಂಥಾಲಯವು ಮೂರು ತಿಂಗಳ ಕಾಲ ಸುಟ್ಟುಹೋಯಿತು. ಮುಸ್ಲಿಂ ಆಕ್ರಮಣಕಾರರು ಮಠಗಳನ್ನು ಧ್ವಂಸಗೊಳಿಸಿದರು ಮತ್ತು ಸನ್ಯಾಸಿಗಳನ್ನು ಅಲ್ಲಿಂದ ಓಡಿಸಿದರು. ಮತ್ತೊಂದು ಐತಿಹಾಸಿಕ ಮೂಲಗಳ ಪ್ರಕಾರ, ಆಯುರ್ವೇದದ ವಿದ್ವಾಂಸರಾದ ರಾಹುಲ್ ಶ್ರೀ ಭದ್ರ ಅವರು ಭಕ್ತಿಯಾರ್ ಖಿಲ್ಜಿಯ ಅನಾರೋಗ್ಯಕ್ಕೆ ಚಿಕಿತ್ಸೆ ನೀಡಿದರು, ಆ ರೋಗವನ್ನು ಅವರ ಆಸ್ತಾನದ ಹಕಿಮ್ಗಳು ಗುಣಪಡಿಸಲಾಗದಿರುವುದು ಎಂದು ಪರಿಗಣಿಸಿದರು, ಒಬ್ಬ ಭಾರತೀಯ ವಿದ್ವಾಂಸ ಮತ್ತು ಶಿಕ್ಷಕ ತನ್ನದೇ ಆಸ್ಥಾನದ ಹಕಿಮ್ಗಳಿಗಿಂತ ಹೆಚ್ಚಿನದನ್ನು ತಿಳಿದಿದ್ದಾನೆ ಎಂಬ ಅಂಶದಿಂದ ವಿಚಲಿತನಾದ ಮತಾಂದ ಖಿಲ್ಜಿ ಈ ದೇಶದಲ್ಲಿ ಎಲ್ಲಾ ಜ್ಞಾನ ಮತ್ತು ಆಯುರ್ವೇದದ ಬೇರುಗಳನ್ನು ನಾಶಮಾಡಲು ನಿರ್ಧರಿಸಿದನು. ಆದ್ದರಿಂದ ಅವನು ನಳಂದದ ಮಹಾ ಗ್ರಂಥಾಲಯಕ್ಕೆ ಬೆಂಕಿ ಹಚ್ಚಿದನು.

            ವಿಕ್ರಮಶಿಲಾ ವಿಶ್ವವಿದ್ಯಾಲಯ (ಬಿಹಾರ) ಖಿಲ್ಜಿಯ ಸೈನ್ಯದಿಂದ ನಾಶವಾಯಿತು. ವಿಶ್ವವಿದ್ಯಾನಿಲಯವು 100 ಎಕರೆಗಳಲ್ಲಿ 3000 ವಿದ್ವಾಂಸರೊಂದಿಗೆ ಹರಡಿತ್ತು, ಬೃಹತ್ ಗ್ರಂಥಾಲಯ ಸಂಕೀರ್ಣವು ಬೃಹತ್ ಕಂಬದ ಹಾಲ್ ಮತ್ತು ಬೆಲೆಬಾಳುವ ಪುಸ್ತಕ ಪ್ರತಿಗಳನ್ನು ಹೊಂದಿರುವ ಕಟ್ಟಡಗಳನ್ನು ತಂಪಾಗಿಸಲು ನೀರಿನ ಜಲಾಶಯವನ್ನು ಒಳಗೊಂಡಿತ್ತು, ಅಂತಹದ್ದು ನಾಶವಾಯಿತು.

            ಓಡಂತಪುರಿ ವಿಶ್ವವಿದ್ಯಾನಿಲಯ (ಬಿಹಾರ) ಲಕ್ಷಾಂತರ ಹಿಂದೂ ಮತ್ತು ಬೌದ್ಧ ಪುಸ್ತಕಗಳ ದೊಡ್ಡ ಗ್ರಂಥಾಲಯವನ್ನು ಹೊಂದಿತ್ತು. ಇದು ಕೂಡ ಖಿಲ್ಜಿಯಿಂದ ನಾಶವಾಯಿತು ಮತ್ತು ವಿಶ್ವವಿದ್ಯಾಲಯದ ಸ್ಥಳದಲ್ಲಿ ಕೋಟೆಯನ್ನು ಕಟ್ಟಲಾಯಿತು.

            ಸೋಮಪುರಿ ವಿಶ್ವವಿದ್ಯಾನಿಲಯ (ಬಂಗಾಳ), ಪಾಲ ರಾಜವಂಶದ ಧರ್ಮಪಾಲರಿಂದ ಕ್ರಿ.ಶ 8 ನೇ ಶತಮಾನದಲ್ಲಿ ಸ್ಥಾಪಿಸಲಾಗಿತ್ತು. ಪ್ರಸ್ತುತ ಬಾಂಗ್ಲಾದೇಶದಲ್ಲಿ 27 ಎಕರೆ ಭೂಮಿಯಲ್ಲಿ ಹರಡಿದ್ದ ಇದು ಬೌದ್ಧ, ಜೈನ ಮತ್ತು ಹಿಂದೂ ಪುಸ್ತಕ ಪ್ರತಿಗಳ ದೈತ್ಯ ಗ್ರಂಥಾಲಯವನ್ನು ಹೊಂದಿತ್ತು. ಇದು ಪುನರಾವರ್ತಿತ ಇಸ್ಲಾಮಿಕ್ ಆಕ್ರಮಣಗಳ ನಂತರ ಕ್ರಿ.ಶ 12 ನೇ ಶತಮಾನದ ಕೊನೆಯಲ್ಲಿ ನಿರ್ಜನವಾಗಿತ್ತು.

            ಜಗದ್ದಾಳ ವಿಶ್ವವಿದ್ಯಾಲಯ (ಬಂಗಾಳ) ತಾಂತ್ರಿಕ ಕಲಿಕೆಯ ಅತಿದೊಡ್ಡ ಕೇಂದ್ರಗಳಲ್ಲಿ ಒಂದಾಗಿತ್ತು. ಇದು ಅನುವಾದ ಸೇವೆಗಳಿಗೆ ಹೆಸರುವಾಸಿಯಾಗಿತ್ತು ಮತ್ತು ಪುಸ್ತಕ ಪ್ರತಿಗಳ ಭವ್ಯವಾದ ಗ್ರಂಥಾಲಯವನ್ನು ಹೊಂದಿತ್ತು - ಕ್ರಿ.ಶ 1027 ರಲ್ಲಿ ಮುಸ್ಲಿಂ ದಾಳಿಕೋರರು ಜಗದ್ದಾಳವನ್ನು ಲೂಟಿ ಮಾಡಿ ನಾಶಪಡಿಸಿದರು.

            ಮೈತ್ರಕ ರಾಜರು ನಿರ್ಮಿಸಿದ ವಲಭಿ (ಗುಜರಾತ್) ಶ್ರೀಮಂತ ಹಿಂದೂ ಮತ್ತು ಬೌದ್ಧ ಜನರ  6000 ನಿವಾಸಿ ವಿದ್ವಾಂಸರನ್ನು ಹೊಂದಿದ್ದ ವಿಶ್ವವಿದ್ಯಾಲಯ ಮತ್ತು ದೇವಾಲಯದ ಪಟ್ಟಣವಾಗಿತ್ತು. ಇದರ ಸ್ಮಾರಕ ಗ್ರಂಥಾಲಯವು ರಾಜಮನೆತನದ ಅನುದಾನದಿಂದ ಪ್ರೋತ್ಸಾಹಿಸಲ್ಪಟ್ಟಿತ್ತು. ಅರಬ್ ಆಕ್ರಮಣಗಳು ಕ್ರಿ.ಶ 12 ನೇ ಶತಮಾನದಲ್ಲಿ ಇದರ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸುವಂತೆ ಒತ್ತಾಯಿಸಿತು.

            ಆಧುನಿಕ ತಕ್ಷಶಿಲಾ ಪಾಕಿಸ್ತಾನದಲ್ಲಿದೆ. ಒಂದು ಕಾಲದಲ್ಲಿ ಇದು ಪ್ರಸಿದ್ಧ ವಿಶ್ವವಿದ್ಯಾಲಯವಾಗಿತ್ತು. ಅದರ ಮೇಲೆ ಶ್ಲಾಘನೆಗಳನ್ನು ಸುರಿಸುವುದರಲ್ಲಿ ಇತಿಹಾಸಕಾರರು ಎಂದಿಗೂ ಆಯಾಸಗೊಂಡಿಲ್ಲ. ಬೌದ್ಧ ಜಾತಕ ಕಥೆಗಳು ಇದನ್ನು 100 ಕ್ಕೂ ಹೆಚ್ಚು ಸ್ಥಳಗಳಲ್ಲಿ ಉಲ್ಲೇಖಿಸಿವೆ. ಪ್ರಸಿದ್ಧ ಪ್ರಾಧ್ಯಾಪಕರು ವೇದ ಮತ್ತು ಇತರ ಕಲೆಗಳನ್ನು ಕಲಿಸಿದರು. ಜೀವಕ ಅವರು ಪ್ರಾಚೀನ ಭಾರತದ ಅತ್ಯಂತ ಪ್ರಸಿದ್ಧ ವೈದ್ಯರಾಗಿದ್ದರು, ಅವರು ತಕ್ಷಶಿಲೆಯ ವಿದ್ಯಾರ್ಥಿ. ಅವರಿಗೆ ಮತ್ತು ಕೋಸಲದ ರಾಜನಿಗೆ ಔಷಧವನ್ನು ಕಲಿಸಿದವನು ಋಷಿ ಆತ್ರೇಯ. ಪಾಲಿ ಮತ್ತು ಸಂಸ್ಕೃತ ಶಿಕ್ಷಣದ ಮಾಧ್ಯಮವಾಗಿತ್ತು. ಚಿತ್ರಕಲೆ, ಸಂಗೀತ, ನೃತ್ಯ, ಶಿಲ್ಪಕಲೆ, ವ್ಯಾಕರಣ ಮತ್ತು ಭಾಷೆ ಸೇರಿದಂತೆ 16 ಅಧ್ಯಾಪಕರು ಅಲ್ಲಿದ್ದರು. ಆಕ್ರಮಣಕಾರರು ಈ ವಿಶ್ವವಿದ್ಯಾಲಯವನ್ನು ನಾಶಪಡಿಸಿದರು. ಈ ವಿಶ್ವವಿದ್ಯಾನಿಲಯವು ಕ್ರಿ.ಪೂ 600 ಯಿಂದ ಕ್ರಿ.ಶ 500 ವರೆಗೆ ಒಂದು ಸಾವಿರ ವರ್ಷಗಳ ಕಾಲ ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳಿಗೆ ಕಲಿಸುತ್ತಿತ್ತು. ಮಧ್ಯ ಏಷ್ಯಾದ ಹನ್ಸ್ ಇದನ್ನು ಸಂಪೂರ್ಣವಾಗಿ ನಾಶಪಡಿಸಿದರು.

            ನಾಡಿಯಾ ವಿಶ್ವವಿದ್ಯಾನಿಲಯವು (ಪಶ್ಚಿಮ ಬಂಗಾಲ) ಸಂಸ್ಕೃತ, ವೇದಗಳು ಮತ್ತು ಅದರ ಆರು ದರ್ಶನಗಳನ್ನು (ವ್ಯವಸ್ಥೆಗಳು) ಕಲಿಯಲು ಪ್ರಸಿದ್ಧವಾಗಿದ್ದವು. ಕ್ರಿ.ಶ 1203 ರ ಮುಹಮ್ಮದನ ಆಕ್ರಮಣದಿಂದ ಸಂಪೂರ್ಣವಾಗಿ ನಾಶವಾಯಿತು.

            ಇಂತಹ ಚರಿತ್ರೆಯಿಂದ ಸಂಸ್ಕೃತ ಕಲಿಕೆ ಯಾವ ರೀತಿಯಲ್ಲಿ ದಾರಿ ತಪ್ಪಿತು, ಅದಕ್ಕೆ ಕಾರಣರಾದವರು ಮತಾಂದ ಅಬ್ರಹಾಮಿಕ್ ಪಂಥದವರು ಮತ್ತು ಮುಸ್ಲಿಮರು ಎನ್ನುವುದರಲ್ಲಿ ಸಂದೇಹವೇ ಇಲ್ಲ. ಹೀಗೆ ಕ್ರಮ ತಪ್ಪಿದ ಮತ್ತು ವೇದ ರಹಸ್ಯ ಕ್ರೂರಿಗಳಿಗೆ ಸಿಗದಂತೆ ಆದ ಪ್ರಯತ್ನದ ಫಲವೇ ನಮಗೆ ವೇದ ರಹಸ್ಯ ಇನ್ನೂ ಗೋಪ್ಯವಾಗಿರುವುದು.

            ಕುಂಡಲಿನಿ ಯೋಗ ಅಥವಾ ಕುಂಡಲಿನಿ ಪ್ರಾಣಾಯಾಮ ಇದನ್ನು ಅನೇಕರು ಅನೇಕ ವಿಧದಲ್ಲಿ ಭೋದಿಸಿ ಇಂದು ಹಲವಾರು ರೀತಿಯ ವಿಚಿತ್ರಕಾರಕ ಅನುಷ್ಟಾನದಿಂದ ಅನೇಕರಿಗೆ ಒಳಿತೂ ಆಗಿದೆ ಕೆಡಕೂ ಆಗಿದೆ. ಇಂದು ಕುಂಡಲಿನಿ ಜಾಗೃತಿಗೊಳಿಸುವ ಅನೇಕ ವಿಧಾನವನ್ನು ಅನೇಕ ತಪಸ್ವಿಗಳು ತಮ್ಮ ಅನುಭಾವಾನುಸಾರ ಭೋದಿಸಿದ್ದಾರೆ, ಮತಾಂದ ಮುಸ್ಲಿಮರ ಕೈಗೆ ಸಿಗದಂತೆ ಭೋದಿಸಿದ್ದಾರೆ. ಆದರೆ ಇಲ್ಲಿ ಎಲ್ಲಾ ರೀತಿಯ ಬೋಧನೆಗಳ ಬದಿಗೊತ್ತಿ ವೇದದಲ್ಲಿ ನಿಜವಾಗಿಯೂ ಏನು ಬೋದನೇ ಇದೆ, ಆಧಿಶಂಕರಾಚಾರ್ಯರು ಈ ಬಗ್ಗೆ ಹೇಳಿರುವ ಸತ್ಯವೇನು, ಅನೇಕ ವಿದ್ವಾಂಸರು ಕಾಲದಿಂದ ಕಾಲಕ್ಕೆ ಏನು ಹೇಳಿದರು. ಕ್ರೌರ್ಯತೆಯ ಅಬ್ರಹಾಮಿಕ್ ಮತೀಯವಾದಿಗಳು ಹಿಂದುತ್ವದ ಮೇಲೆ ದಾಳಿ ಮಾಡಿದಾಗ ಅಂತಹ ಸತ್ಯ ಏಕೆ ಮುಚ್ಚಿಡಲಾಯಿತು. ವೇದಗಳಲ್ಲಿನ ರಹಸ್ಯವನ್ನು ಅರೆ ಬರೆ ಓದಿ ಅದರ ಅನುಷ್ಠಾನ ಅರೆ ಬರೆ ಮಾಡಿ ಚರಿತ್ರೆಯಲ್ಲಿ ಉದ್ಬವವಾದ ಅನೇಕ ಕ್ರೌರ್ಯ ತೋರುವ ಸ್ವಯಂ ಘೋಷಿತ ಗುರುಗಳ ಆಗಮನದಿ ನಮ್ಮ ವೇದ ಜ್ಞಾನ ಹೇಗೆ ಮುಚ್ಚಿಹಾಕಲಾಯಿತು. ಅಂದು ಪರಕೀಯರಿಂದ ರಹಸ್ಯವಾಗಿಡಲು ಅನೇಕ ವಿದ್ವಾಂಸರು ಮಾಡಿದ ಪ್ರಯತ್ನದಲ್ಲಿ (ತಪ್ಪು ವ್ಯಾಖ್ಯಾನ/ ಗೊಂದಲಮಯ ವ್ಯಾಖ್ಯಾನದಿಂದ/ ವಿಭಿನ್ನ ವ್ಯಾಖ್ಯಾನ)  ನಮ್ಮಲ್ಲಿ ಉಂಟಾದ ಬದಲಾವಣೆ ಏನು. ಇವೆಲ್ಲವನ್ನೂ ತಿಳಿಯಲು ಮೊದಲು ಸತ್ಯ ಏನು ಎಂಬುದು ಅರಿವಿಗೆ ಬರಬೇಕು. ಆ ಸತ್ಯ ತಿಳಿಸುವ ಪ್ರಯತ್ನವೇ ಈ ಗ್ರಂಥದ ಸಂಶೋಧನೆ.

            ವೇದಗಳಲ್ಲಿ ಪದಗಳು ಯೋಗ ವಿಧಾನವನ್ನು ಅನುಸರಿಸ-ಬೇಕಾಗುತ್ತದೆ ಎಂದು ಮೊದಲಿಗೆ ತೋರಿಸಿಕೊಟ್ಟದ್ದು, ಮಹರ್ಶಿ ಯಾಶ್ಕಾ ಚಾರ್ಯ, ಪಾಣಿನಿ ಮತ್ತು ಪತಂಜಲಿ ಸ್ಥಾಪಿಸಿದ ಅರ್ಶ್ ಸಂಪ್ರದಾಯ. ಇದು ಐತಿಹಾಸಿಕವಾಗಿ ಮಾತ್ರ ತೆಗೆದುಕೊಳ್ಳುವ ರೂಡಿ ವಿಧಾನವನ್ನು ವಿರೋಧಿಸುತ್ತದೆ. ಮಹರ್ಶಿ ಯಾಶ್ಕಾ ಚಾರ್ಯ (ಸುಮಾರು 2700 ವರ್ಷ ಹಿಂದಿನವರು) ನಂತರ ಮಹರ್ಷಿ ಪತಂಜಲಿ ಪಾಣಿನಿ ಅಷ್ಟಾಧ್ಯಾಯ ಮಹಾಭಾಷ್ಯ 2200 ವರ್ಷಗಳ ಹಿಂದೆ ಈ ತತ್ವವನ್ನು ಪ್ರತಿಪಾದಿಸಿದ್ದರು. ಹಿಂದೂ ಧರ್ಮದಲ್ಲಿ, ಮೂರು ಮಹಾನ್ ಆಚಾರ್ಯರು – ಶ್ರೀ ಆದಿ ಶಂಕರಾಚಾರ್ಯ, ಶ್ರೀ ಮಧ್ವಚಾರ್ಯ ಮತ್ತು ಶ್ರೀ ರಾಮಾನುಜಚಾರ್ಯ -ರನ್ನು ಒಟ್ಟಾಗಿ "ಆಚಾರ್ಯತ್ರಯ" ಎಂದು ಕರೆಯಲಾಗುತ್ತದೆ. ಈ ಮೂವರು ಆಚಾರ್ಯರನ್ನು ಆಧ್ಯಾತ್ಮಿಕ ಭಾರತದ ವೇದಾಂತ ಸಂಪ್ರದಾಯದ ಆಧಾರ ಸ್ತಂಭಗಳೆಂದು ಪರಿಗಣಿಸಲಾಗಿದೆ. ಇತ್ತೀಚೆಗೆ 1824 ರಿಂದ 1883 ರಲ್ಲಿ ಮೊದಲ ಬಾರಿಗೆ ಮಹರ್ಷಿ ದಯಾನಂದ ಸರಸ್ಪತಿರವರು ಅರ್ಶ್ ಸಂಪ್ರದಾಯ ತತ್ವವನ್ನು ಪ್ರತಿಪಾದಿಸಿದರು ಮತ್ತು ಅನುಸರಿಸಿದರು. ದಯಾನಂದ ಸರಸ್ವತಿಯವರ ನಂತರ 1950 ರ ನಂತರದ ಡಾ. ತುಳಸಿ ರಾಮ್ ಶರ್ಮಾ, ಗೋಪಿ ಕೃಷ್ಣ  ಈ ವಿಚಾರದಲ್ಲಿ ವಿಶಿಷ್ಟ ಸ್ಥಾನವನ್ನು ಹೊಂದಿದ್ದಾರೆ. ಮಹನೀಯರುಗಳಾದ ಮಹರ್ಶಿ ಯಾಶ್ಕಾಚಾರ್ಯ, ಪಾಣಿನಿ, ಪತಂಜಲಿ, ದಯಾನಂದ ಸರಸ್ಪತಿ, ಅರಬಿಂದೋ, ಮತ್ತು ಡಾ ತುಳಸಿ ರಾಮ್ ಶರ್ಮಾ ಗೋಪಿ ಕೃಷ್ಣ ರವರ ಅರ್ಥೈಸುವಿಕೆಯಿಂದ ದೂರ ಸರಿಯಲು ಸಾಧ್ಯವಿಲ್ಲ. ಏಕೆಂದರೆ ಅವರು ವೈಜ್ಞಾನಿಕ ವ್ಯಾಖ್ಯಾನದ ಪ್ರಮುಖ ತತ್ವಗಳು ಮತ್ತು ಅಭ್ಯಾಸಗಳನ್ನು ಒದಗಿಸುತ್ತಾರೆ. ಇಲ್ಲಿ  ವಿಜ್ಞಾನದ ಭಾಷೆ ಹೇಳುತ್ತದೆ ಕಥೆಗಳಿಲ್ಲ, ಪುರಾಣಗಳಿಲ್ಲ. ಇದು ಸತ್ಯವನ್ನು ಶುದ್ಧ ಮತ್ತು ಸರಳವಾಗಿ ಹೇಳುತ್ತದೆ. 

            ಶ್ರೇಷ್ಠ ವ್ಯಾಖ್ಯಾನಕಾರರಾದ ಸಾಯನಾರವರು  ನಮಗೆ ಧಾರ್ಮಿಕ ಮತ್ತು ಅಗತ್ಯವಿದ್ದಲ್ಲಿ ತಾತ್ಕಾಲಿಕವಾಗಿ ಪೌರಾಣಿಕ ಅಥವಾ ಐತಿಹಾಸಿಕ ಅರ್ಥವನ್ನು ಶ್ಲೋಕಗಳಲ್ಲಿ ನೀಡುತ್ತಾರೆ, ಅವರು ಅಪರೂಪವಾಗಿ ಯಾವುದಾದರೂ ಉನ್ನತ ಅರ್ಥವನ್ನು ಮುಂದಿಡುತ್ತಾರೆ, ಆದರೂ ಕೆಲವೊಮ್ಮೆ ಅವರು ಕೆಲವು ಧಾರ್ಮಿಕ ಅಥವಾ ಪೌರಾಣಿಕ ವ್ಯಾಖ್ಯಾನವನ್ನು ಕಂಡುಹಿಡಿಯುವ ವಿಧಾನದಲ್ಲಿ  ಉನ್ನತ ಅರ್ಥವನ್ನು ಹೊರ ಬಿಡುತ್ತಾರೆ ಅಥವಾ ಅದನ್ನು ಪರ್ಯಾಯವಾಗಿ ಇರಿಸುತ್ತಾರೆ. ಆದರೆ ಅವರು ವೇದದ ಆಧ್ಯಾತ್ಮಿಕ ಅಧಿಕಾರವನ್ನು ತಿರಸ್ಕರಿಸುವುದಿಲ್ಲ ಅಥವಾ ಶ್ಲೋಕಗಳಲ್ಲಿ ಹೆಚ್ಚಿನ ಸತ್ಯವಿದೆ ಎಂದು ನಿರಾಕರಿಸುವುದಿಲ್ಲ.

            ಅನೇಕ ವಿದ್ವಾಂಸರ ಅಭಿಪ್ರಾಯ ಹೀಗಿದೆ ".......... ಉಪನಿಷತ್ತುಗಳ ಕಾಲದಲ್ಲಿಯೂ ಸಹ ಯುಗದ ಆಧ್ಯಾತ್ಮಿಕ ಅನ್ವೇಷಕರು ತಮ್ಮ ರಹಸ್ಯ ಜ್ಞಾನವನ್ನು ಭೇದಿಸಲು ದೀಕ್ಷೆ ಮತ್ತು ಧ್ಯಾನವನ್ನು ಆಶ್ರಯಿಸಬೇಕಾಗಿತ್ತು, ......... ಯಾಶ್ಕಾಚಾರ್ಯರ ಸುಳಿವು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕು, ವೇದದ ವಿಷಯಗಳ ಬಗ್ಗೆ ಋಷಿಯ ವಿವರಣೆಯನ್ನು "ಋಷಿ-ಜ್ಞಾನಗಳು, ರಹಸ್ಯ ಪದಗಳು" ಎಂದು ಒಪ್ಪಿಕೊಳ್ಳಿ ಮತ್ತು ಈ ಪ್ರಾಚೀನ ಬುದ್ಧಿವಂತಿಕೆಗೆ ನಾವು ಕಂಡುಕೊಳ್ಳಬಹುದಾದ ಯಾವುದೇ ಸುಳಿವುಗಳನ್ನು ನೋಡಿ. ಇಲ್ಲವಾದರೆ ವೇದ ಎಂದೆಂದಿಗೂ ಮೊಹರು ಪುಸ್ತಕವಾಗಿ ಉಳಿಯಬೇಕು; ವ್ಯಾಕರಣಕಾರರು, ಪದದ ಹಿನ್ನೆಲೆ ಶಾಸ್ತ್ರಜ್ಞರು, ಪಾಂಡಿತ್ಯಪೂರ್ಣ ಊಹೆಗಳು ನಮಗೆ ಮುಚ್ಚಿದ ಕೋಣೆಯನ್ನು ತೆರೆಯುವುದಿಲ್ಲ. ................ ವೈದಿಕ ಋಷಿಗಳು ತಮ್ಮ ಮಂತ್ರಗಳು ಹೆಚ್ಚಿನ ಗುಪ್ತ ಪ್ರಜ್ಞೆಯಿಂದ ಪ್ರೇರಿತವಾಗಿವೆ ಮತ್ತು ಈ ರಹಸ್ಯ ಜ್ಞಾನವನ್ನು ಒಳಗೊಂಡಿವೆ ಎಂದು ನಂಬಿದ್ದರು. ವೇದದ ಪದಗಳನ್ನು ಅದರ ನಿಜವಾದ ಅರ್ಥದಲ್ಲಿ ಸ್ವತಃ ಒಬ್ಬ ದಾರ್ಶನಿಕ ಅಥವಾ ಅತೀಂದ್ರಿಯರ ಮೂಲಕ ಮಾತ್ರ ತಿಳಿಯಬಹುದು; ಇತರರಿಂದ ಪದ್ಯಗಳು ಅವರ ಗುಪ್ತ ಜ್ಞಾನವನ್ನು ತಡೆಹಿಡಿಯುತ್ತವೆ. ................. ಪವಿತ್ರ ಸ್ತೋತ್ರಗಳಲ್ಲಿ ನಿಗೂಢ ಮತ್ತು ಆಧ್ಯಾತ್ಮಿಕ ಜ್ಞಾನವಿತ್ತು ಮತ್ತು ಈ ಜ್ಞಾನದಿಂದ ಮಾತ್ರ ಸತ್ಯವನ್ನು ತಿಳಿದುಕೊಳ್ಳಬಹುದು ಮತ್ತು ಉನ್ನತ ಅಸ್ತಿತ್ವಕ್ಕೆ ಏರಬಹುದು ಎಂದು ಹೇಳಲಾಗುತ್ತದೆ." 

            ರಾಮ ಅಯ್ಯಂಗಾರ್ ರವರು ವಿವರಿಸಿರುವಂತೆ ಋಗ್ವೇದವು ಅಗ್ನಿ ಋಷಿಯ, ಯಜುರ್ವೇದವು ವಾಯು ಖುಷಿಯ, ಸಾಮ ವೇದವು ಸೂರ್ಯ ಋಷಿಯ, ಅಥರ್ವ ವೇದವು ಅಂಗಿರಾ ಋಷಿಯ, ಅಂತರಂಗದಲ್ಲಿ ಸ್ಪೂರ್ತಿ ರೂಪದಲ್ಲಿ ಲಭಿಸಿ ಪ್ರಕಟವಾಗಿವೆ. ವೇದವನ್ನು ವರ್ಗೀಕರಿಸಿ, ವೇದಾಧ್ಯಯನವನ್ನು ಪುನರುಜ್ಜಿವನಗೊಳಿಸಿದ ವ್ಯಾಸರು, ಅದರ ಅಧ್ಯಯನವು ಸತತವಾಗಿ ಬೆಳೆಯುವಂತಾಗಲು ಆದನ್ನು ತಮ್ಮ ಶಿಷ್ಯರಾದ ಪೈಲನಿಗೆ ಋಗ್ವೇದ, ವೈಶಂಪಾಯನನಿಗೆ ಯಜುರ್ವೇದ, ಜೈಮಿನಿಗೆ ಸಾಮವೇದ, ಸಾಮಂತುವಿಗೆ ಅಥರ್ವ ವೇದವನ್ನು ಉಪದೇಶಿಸಿದರು. ವೇದಗಳಲ್ಲಿ ಒಟ್ಟು 20240 ಮಂತ್ರ ಗಳಿವೆ ಎನ್ನಲಾಗಿದೆ. ಜ್ಞಾನಪ್ರಧಾನವಾದ ಋಗ್ವೇದದಲ್ಲಿ 85 ಅನುವಾಕಗಳು, 1028 ಸೂಕ್ತಗಳು, 10580 ಖುಕ್ಕುಗಳು, 153826 ಶಬ್ದಗಳು, 432000 ಅಕ್ಷರಗಳು ಇವೆ. ವೇದಗಳಲ್ಲಿ ಪ್ರಾಚೀನವಾದ ಇದರಲ್ಲಿ ಸಮಸ್ತ ಪದಾರ್ಥಗಳ ಉತ್ಪತ್ತಿ ಹಾಗೂ ಗುಣ ಧರ್ಮಗಳ, ಪ್ರಕೃತಿಯ, ಭೂತಗಳ ಸೃಷ್ಟಿಯ, ವರ್ಣನೆ ವಿವರಣೆಗಳು ಇದ್ದು,  ಈ ಜ್ಞಾನವೇ ಎಲ್ಲ ಸಂಸ್ಕಾರ ಪ್ರವೃತ್ತಿಗಳಿಗೆ ಕಾರಣವಾಗಿದೆ. ವೀರ, ಕರುಣ, ಭಕ್ತಿ ರಸಗಳಿಂದ ತುಂಬಿದ ಕಾವ್ಯ ಗುಣವನ್ನು ಈ ಮಂತ್ರಗಳಲ್ಲಿ ಕಾಣಬಹುದು. ಕರ್ಮ ಪ್ರಧಾನವಾದ ಯಜುರ್ವೇದದಲ್ಲಿ 44 ಅಧ್ಯಾಯಗಳು, 303 ಅನುವಾಕಗಳು, 1925 ಮಂತ್ರಗಳು, 29625 ಶಬ್ದಗಳು, 88875 ಅಕ್ಷರಗಳು ಇವೆ. ಯಜ್ಞ ಯಾಗಾದಿಗಳ ಜ್ಞಾನ, ಕರ್ಮ, ಫಲ, ನ್ಯಾಯ ಮಾರ್ಗದಲ್ಲಿ ನಡೆಯಲು ಬೇಕಾದ ಉಪದೇಶ, ವಿವಿಧ ವಿದ್ಯೆಗಳು ವ್ಯವಹಾರಕ್ಕೆ ಬೇಕಾದ ಸೂತ್ರಗಳು ಇದರಲ್ಲಿ ಇವೆ, ಮುಖ್ಯವಾಗಿ ಕರ್ಮಕಾಂಡ ಪ್ರತಿಪಾದ್ಯ ವಿಷಯವಾಗಿದೆ. ಭಕ್ತಿ ಪ್ರಧಾನವಾದ ಸಾಮವೇದದಲ್ಲಿ 21 ಅಧ್ಯಾಯಗಳು, 1875 ಮಂತ್ರಗಳು ಇವೆ. ಇದರಲ್ಲಿ ಆಗ್ನಿ, ಇಂದ್ರ ಆದಿದೇವತೆಗಳ ಉಪಾಸನೆ, ಪ್ರಧಾನ ಪ್ರತಿಪಾದ್ಯ ವಿಷಯ, ಆನಂದವನ್ನು ಗಳಿಸುವ ಉಪಾಯ, ಇದೆ, ವಿಜ್ಞಾನ ಪ್ರಧಾನವಾದ ಅಥರ್ವ ವೇದದಲ್ಲಿ 731 ಸೂಕ್ತಗಳು, 5987 ಮಂತ್ರಗಳು ಇವೆ, ದೈನಂದಿನ ಧರ್ಮ ಕರ್ಮಗಳ ವಿಶೇಷ ಜ್ಞಾನ ಇದರಲ್ಲಿದೆ. ವರ ಹಾಗೂ ಶಾಪಗಳನ್ನು ತರುವ ಮಂತ್ರಗಳು ಇದರಲ್ಲಿವೆ. ಅಂದರೆ ಪ್ರೇಮ, ಸುಖ ಜೀವನ, ಆರೋಗ್ಯ ಆಯುಸ್ಸುಗಳ ಅಭಿವೃದ್ಧಿ, ಪ್ರವಾಸದಲ್ಲಿ ರಕ್ಷಣೆ, ಜೂಜಿನಲ್ಲಿ ಗೆಲುವು ಮುಂತಾದುವನ್ನು ಹೊಂದುವ ಉಪಾಯಗಳು ಇಲ್ಲಿ ಹೇಳಲ್ಪಟ್ಟಿವೆ. ಜೊತೆಗೆ ಶತ್ರು, ರಾಕ್ಷಸ, ಮಾಂತ್ರಿಕ, ದುಷ್ಟ ಪ್ರಾಣಿ ರೋಗ ಮುಂತಾದುವುಗಳ ನಿವಾರಣೋಪಾಯಗಳು ಇದರಲ್ಲಿವೆ. ಮಾರಣ ಮೋಹನ, ಉಚ್ಚಾಟನ ಮೊದಲಾದ ಅಭಿಚಾರಿಕ ಕ್ರಿಯೆಗಳ ವಿಶೇಷ ವರ್ಣನೆ ಇದರಲ್ಲಿದೆ. ಮುಖ್ಯವಾಗಿ ಒಂದೊಂದು ವೇದಕ್ಕೂ ತನ್ನದೇ ಆದ ಸಂಹಿತೆ, ಬ್ರಾಹ್ಮಣ, ಆರಣ್ಯಕ, ಉಪನಿಷತ್ತು ಎಂಬ ನಾಲ್ಕು ಸ್ಕಂಧಗಳಿವೆ. ಕ್ರಮಬದ್ಧವಾಗಿ ಕ್ರೋಢೀ ಕರಿಸಲ್ಪಟ್ಟ ಪದ್ಯರೂಪದ ಮಂತ್ರಗಳೇ ಸಂಹಿತೆ; ಸಂಹಿತೆಯ ಮಂತ್ರಗಳನ್ನು ಯಜ್ಞಗಳಲ್ಲಿ ಉಪಯೋಗಿಸುವ ವಿಧಾನವನ್ನು ತಿಳಿಸುವುದು ಅಂದರೆ ವೇದ ಮಂತ್ರಗಳ ಅರ್ಥವಿವರಣೆಗಾಗಿ ಬರೆಯಲ್ಪಟ್ಟ ಗದ್ಯರೂಪದ ಗ್ರಂಥಗಳೇ ಬ್ರಾಹ್ಮಣಗಳು; ಅರಣ್ಯದಲ್ಲಿ ಅಧ್ಯಯನಮಾಡಬೇಕಾದ ಗೂಢಾರ್ಥ ಚಿಂತನೆಯ ಅಂಶಗಳನ್ನು ವಿವೇಚಿಸುವುದು ಅಂದರೆ ಧಾರ್ಮಿಕ ಸಿದ್ಧಾಂತಗಳನ್ನು ಚರ್ಚಿಸುವುದು ಆರಣ್ಯಕ; ಅರಣ್ಯಕಗಳ ಕೊನೆಯ ಭಾಗಗಳೆನಿಸಿ, ಆಧ್ಯಾತ್ಮ ತತ್ತ್ವಗಳನ್ನು ವಿವರಿಸುವುದು ಉಪನಿಷತ್ತು”.

            ಹೀಗೆ ವೈದಿಕ ವ್ಯಾಖ್ಯಾನಗಳನ್ನು ವಿದ್ವಾಂಸರು ಹೇಗೆ ಗ್ರಹಿಸಿದ್ದಾರೆ ಎಂಬುದಕ್ಕೆ ಇದು ಐತಿಹಾಸಿಕ ಹಿನ್ನೆಲೆಯಲ್ಲಿ ಬದಲಾದ ಸಂಧರ್ಬಕ್ಕೆ ಅನುಗುಣವಾಗಿದೆ. ನನ್ನ ಹಿಂದಿನ ಪುಸ್ತಕ "ಮುಸ್ಲಿಂ ಬಯೋತ್ಪಧನೆ" ಕನ್ನಡದಲ್ಲಿ ಬರೆಯುವ ಸಂಧರ್ಬದಲ್ಲಿ ನಾ ಕಂಡಂತೆ, ಕುರಾನಿನ 13 ಅಧ್ಯಾಯಗಳಲ್ಲಿ ಪ್ರಾರಂಭವಾಗುವ ಮೂರರಿಂದ ನಾಲ್ಕು ರೀತಿಯ ಅರೇಬಿಕ್ ಅಕ್ಷರಗಳನ್ನು ನಾನು ನೋಡಿದ್ದೇನೆ. ಅವುಗಳೆಂದರೆ "ಅಲಿಫ್ ಲಾಮ್ ಮಿಮ್", "ಅಲಿಫ್ ಲಾಮ್ ಮಿಮ್ ಸ್ವಾದ್" ಮತ್ತು "ಅಲಿಫ್ ಲಾಮ್ ರಾ". ಅನೇಕ ಕುರಾನ್ ತಜ್ಞರು, ತಮ್ಮ ದೇವರು ಅಲ್ಲಾಹರು ಮಾತ್ರ ಅರ್ಥವನ್ನು ತಿಳಿದಿದ್ದಾರೆ ಎಂದು ಹೇಳಿದ್ದಾರೆ, ಅವರು ಅಕ್ಷರಗಳನ್ನು ಅರೇಬಿಕ್ ಅಕ್ಷರಗಳೆಂದು ಒಪ್ಪಿಕೊಳ್ಳುತ್ತಾರೆ. ಈ ಅಕ್ಷರಗಳು ಯಹೂದಿಗಳ ಹೀಬ್ರೂ ಭಾಷೆಗೆ ಅನುರೂಪವಾಗಿದೆ. ಅಂತಹ ಅಕ್ಷರಗಳನ್ನು ಯಾವ ಉದ್ದೇಶಕ್ಕಾಗಿ ಬಳಸಲಾಗಿದೆ ಎಂಬ ವಿವರಣೆಯಿಲ್ಲ. ಇದು ಏನು ಸೂಚಿಸುತ್ತದೆ ಎಂಬುದರ ಕುರಿತು ಯಾವುದೇ ವಿವರಣೆಯಿಲ್ಲ. ಹಿಂದೂ ವೈದಿಕ ಮತ್ತು ಉಪನಿಷತ್ ಸಾಹಿತ್ಯದ ಮೇಲಿನ ನಿರಂತರ ಸಂಶೋಧನೆಯ ನಂತರ, ಅಂತಹ ಅಕ್ಷರಗಳ ಬಳಕೆಯ ರಹಸ್ಯವು ಈ ಪುಸ್ತಕದಲ್ಲಿ ತೆರೆದಿಡುವ ಪ್ರಯತ್ನ ಮಾಡಿದ್ದೇನೆ. ಧ್ಯಾನ ಆಧರಿಸಿದ ಈ ಸಂಶೋಧನೆಯು ನನಗೆ ನೀಡಲಾದ ಜ್ಞಾನದ ಮುಖೇನ ಆರೋಗ್ಯ ಮತ್ತು ಜ್ಞಾನದ ವೈದಿಕ ರಹಸ್ಯಗಳ ಬಗ್ಗೆ ನಿಜವಾದ ಮತ್ತು ಅರ್ಥಪೂರ್ಣ ಅರ್ಥವನ್ನು ತೆರೆದಿದೆ. ನನ್ನ ಹುಡುಕಾಟದ ಪ್ರಕಾರ ಇಲ್ಲಿಯವರೆಗೆ ಅಂತಹ ವ್ಯಾಖ್ಯಾನ ತಂತ್ರದ ಪುಸ್ತಕವು ನನ್ನ ಗಮನಕ್ಕೆ ಬಂದಿಲ್ಲ. ಬಹಶಃ ಅಂತಹ ಪ್ರಯತ್ನದ ಪುಸ್ತಕಗಳು ಮುಸ್ಲಿಂ ಮತಾಂಧರಿಂದ ನಾಶವಾಗಿರಲೂ ಬಹುದು, ಅದನ್ನು ವಿಧ್ವಾಂಸರು ಇಂದಿಗೂ ಗೋಪ್ಯವಾಗಿ ಇಟ್ಟಿರಲೂ ಬಹುದು. ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ಆಕ್ರಮಣಗಳ ಕಾರಣದಿಂದಾಗಿ ಅಂತಹ ವ್ಯಾಖ್ಯಾನ ತಂತ್ರವನ್ನು ರಹಸ್ಯವಾಗಿಡಲಾಗಿರಬಹುದು, ಅಥವಾ ತಪ್ಪು ವ್ಯಾಖ್ಯಾನವಾಗಿರಬಹುದು ಅಥವಾ ವ್ಯಾಖ್ಯಾನದ ಅನೇಕ ವಿಧಾನ ಅನುಸರಿಸಿರಬಹುದು. ಮುಸ್ಲಿಮರ ಕುರಾನ್ ಪುಸ್ತಕದಲ್ಲಿನ ಅಂತಹ ಅಕ್ಷರಕ್ಕೆ ಸತ್ಯ ತಿಳಿಸಿದರೆ ಕುಂಡಲಿನಿ ಪ್ರಾಣಾಯಾಮ ವಿದ್ಯೆ ಒಪ್ಪಿಕೊಳ್ಳಬೇಕಿರುತ್ತದೆ ಎಂದು ಮುಸ್ಲಿಂ ಗ್ರಂಥಗಳನ್ನು ಬರೆದವರೂ ಇದರ ಬಗ್ಗೆ ಮಾತನಾಡದೇ ಸುಮ್ಮನಾಗಿರಬಹುದು. ಇಲ್ಲಿ ಮುಸ್ಲಿಮರು ಸುಮ್ಮನಾಗಿರುವುದು ಅವರ ಮೂಲ ಗ್ರಂಥವು ಕುಂಡಲಿನಿ ಯೋಗವನ್ನು ಒಪ್ಪಿದರೆ ಹಿಂದುತ್ವವನ್ನು ಒಪ್ಪಿದಂತೆ ಎಂಬ ಕಾರಣಕ್ಕೂ ಇರಬಹುದು. ಅಂತಹ ಕುಂಡಲಿನಿ ಪ್ರಾಣಾಯಾಮದ ಮಹತ್ವ ತಿಳಿಯದೆ ತಪಸ್ಸಿಗೆ ಕುಳಿತ ಅವರ ಗುರುವಿಗೆ ಆದ ಮನಸ್ಸಿನ ಮೇಲಿನ  ಪರಿಣಾಮದ ಅನುಯಾಯಿತ್ವವೂ ಇರಬಹುದು. ಒಟ್ಟಾರೆ ಕುಂಡಲಿನಿ ಪ್ರಾಣಾಯಾಮದ ಉಸಿರಾಟ ಧ್ಯಾನ ವಿಧಾನವು ಧಾರ್ಮಿಕವಾಗಿ ಸರ್ವ ಶ್ರೇಷ್ಟವಾದ ವಿಧಾನವಾಗಿದೆ ಎಂದು ಸನಾತನ ಧರ್ಮದ ಸಾರುವಿಕೆಯನ್ನು ಕಾಪಿ ಮಾಡಿದ ಅದೆಷ್ಟೋ ಮತಗಳು ಅದನ್ನು ಅನುಷ್ಟಾನಕ್ಕೆ ತರದೆ ಅದಕ್ಕೆ ವಿರುದ್ದ ನಡೆದುಕೊಂಡು ಅದನ್ನು ಅರ್ಧಕ್ಕೆ ಕೈಬಿಟ್ಟು ದಾರಿ ತಪ್ಪಿದ್ದು ಚರಿತ್ರೆಯ ಪುಟಗಳಲ್ಲಿ ಸೂಕ್ಷ್ಮವಾಗಿ ಗಮನಿಸಬಹುದು. ಈ ಪುಸ್ತಕ ಅಧ್ಯಯನದಿಂದ ಎಲ್ಲರೂ ವೇದ ಅನುವಾದದಲ್ಲಿ ಹೆಚ್ಚಿನ ಕ್ರಾಂತಿಕಾರಿ ಬದಲಾವಣೆ ಮುಂದಕ್ಕೂ ತರಲಿ ಎಂದು ನಾನು ಇಚ್ಚಿಸುತ್ತೇನೆ.  

            ಇದನ್ನು ಧ್ಯಾನ ನಿರತರಿಗೆ, ಧಾರ್ಮಿಕ ಹಿಂದುಗಳಿಗೆ, ಜಾತ್ಯಾತೀತ ಹಿಂದುಗಳಿಗೆ, ನಮ್ಮ ಯುವ ಪೀಳಿಗೆಗೆ, ಅನ್ಯ ಮತದವರ ಮನಃ ಪರಿವರ್ತನೆಗೆ ಪ್ರಯತ್ನಿಸಲು ಸಂಗ್ರಹಿಸಿದ್ದೇನೆ. ನಾನು ಸಂಸ್ಕೃತ ವಿದ್ವಾಂಸನಲ್ಲ, ಆದರೆ ಶಾಲೆಯಲ್ಲಿ ಮತ್ತು ಕಾಲೇಜಿನಲ್ಲಿ ಸಂಸ್ಕೃತ ಓದಿದ್ದೇನೆ. ಈಗ ತಾಂತ್ರಿಕತೆಯೂ ಉತ್ತುಂಘದಲ್ಲಿ ಇದ್ದು ಸಂಸ್ಕೃತ ಗ್ರಂಥಗಳು ಶಬ್ದಕೋಶಗಳು ಉಚಿತವಾಗಿ ಲಭ್ಯವಾಗುವ ತಾಣಗಳು ಇವೆ. ಇದನ್ನು ಲಭ್ಯವಾಗುವಂತೆ ಮಾಡಿದ ಎಲ್ಲರಿಗೂ ಧನ್ಯವಾದಗಳು. ಶ್ರೀ ಜಯಚಾಮರಾಜೇಂದ್ರ ಗ್ರಂಥ ರತ್ನಮಾಲಾ ಪುಸ್ತಕಗಳಾದ ವೇದಗಳು, ಪುರಾಣಗಳು, ಉಪನಿಷದ್ಗಳು, ಇತರೆ ವಿಚಾರಗಳನ್ನು ಕನ್ನಡಕ್ಕೆ ಅನುವಾದ ಮಾಡಿಸಿ ಅಧ್ಯಯನಕ್ಕೆ ಅನುವು ಮಾಡಿಕೊಟ್ಟ ಮೈಸೂರು ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಪ್ರಭುಗಳಿಗೆ ಮತ್ತು ಅವರ ಆಸ್ಥಾನ ವಿದ್ವಾಂಸರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು. ಸಂಸ್ಕೃತ ಶಬ್ದಕೋಶಗಳನ್ನು ತಾಂತ್ರಿಕವಾಗಿ ಆನ್ಲೈನ್ ನಲ್ಲಿ ಉಚಿತವಾಗಿ ಒದಗಿಸಿಕೊಟ್ಟ ಮಹಾನುಭಾವರಿಗೆ ಧನ್ಯವಾದಗಳು.  ಸಂಸ್ಕೃತ ಶಬ್ದಕೋಶಗಳಾದ ನನ್ನ ಸಂಶೋಧನೆಗೆ ಸಾಹಾಯಕವಾದವುಗಳು ಈ ಕೆಳಗೆ ಇದೆ.

https://sanskritdictionary.com/ ,

https://www.learnsanskrit.cc/index.php?mode=0 , https://dsal.uchicago.edu/dictionaries/sanskrit/ 

https://www.shabdkosh.com/

https://kosha.sanskrit.today/

            ನನಗೆ ನನ್ನದೇ ಆದ ಆರನೇ ಇಂದ್ರಿಯ ಜಾಗೃತಿಯಿಂದ ಆದ ಸತ್ಯ ಸಾಕ್ಷಾತ್ಕಾರವನ್ನು ಮುಂದಿನ ಪೀಳಿಗೆಗೆ ಅರ್ಪಿಸಬೇಕೆಂಬ ಬಯಕೆಯೂ ಈ ಗ್ರಂಥಕ್ಕೆ ಕಾರಣವಾಗಿದೆ. ಸುಮಾರು 2000 ನೇ ಇಸವಿಯಿಂದ ಕಾನೂನು ವಿಚಾರದ ಸತತ ಅಧ್ಯಯನ ಸಂಶೋಧನೆಗೆ ಏಕಾಗ್ರಾಚಿತ್ತವಾಗಿ ಕುಳಿತ ನನಗೆ ಆರನೇ ಇಂದ್ರಿಯ ಜಾಗೃತಿ ಆಗಿರುವ ಬಗ್ಗೆ ಕ್ರಮೇಣ ತಿಳಿಯುತ್ತಾ ಬಂದಿತು. ನನ್ನ ಅರಿವಿಗೆ ಬಂದ ಆರನೇ ಇಂದ್ರಿಯ ಜಾಗೃತಿ ಇಲ್ಲಿವರೆಗೆ ಕಾನೂನು ಕ್ಷೇತ್ರಕ್ಕೇ ಸೀಮಿತವಾಗಿ ಉಪಯೋಗಿಸಿ ಅನೇಕ ಕೊಡುಗೆಯನ್ನು ಯುವ ವಕೀಲರಿಗೆ ನೀಡಿದ್ದೇನೆ. ಕೆಲವರು ನನ್ನ ಕಾನೂನು ಸಂಗ್ರಹ ಪುಸ್ತಕಗಳ ನೋಡಿ, ಸಾರ್ ಇದು ನೀವು ಒಬ್ಬರೇ ಮಾಡಿರುವ ಸಂಶೋಧನೆ ಅಲ್ಲ ನಿಮ್ಮ ಬಹು ದೊಡ್ಡ ಟೀಮು ಇದೆ ಎಂದು ಕೇಳಿದ್ದುಂಟು. ಆದರೆ ನನ್ನ ಉತ್ತರ ಒಂದೇ ಜಗತ್ತಿನಲ್ಲಿ ಎಲ್ಲರನ್ನೂ ಗುರುವಾಗಿ ಸ್ವೀಕರಿಸಬೇಕು, ಅನೇಕರಿಂದ ಕಲಿಯುವುದು ಅನೇಕ ವಿಚಾರಗಳು ಇವೆ. ಆರನೇ ಇಂದ್ರಿಯ ಜಾಗೃತಿ ಆದರೆ ಎಲ್ಲರಿಂದಲೂ ಇಂತಹ ವಿಸ್ಮಯ ನೀಡಲು ಸಾಧ್ಯ. ಇತ್ತೀಚೆಗೆ ಹಿಂದು ಗ್ರಂಥಗಳ ಅಧ್ಯಯನ ಮನನದಿಂದ ನನಗೆ ಕೆಲವು ಕನ್ನಡ ತರ್ಜುಮೆ ಪುಸ್ತಕಗಳನ್ನು ಓದುತ್ತಿದ್ದಾಗ ಇಲ್ಲಿ ಏನೋ ತಪ್ಪು ಆಗಿದೆ ಎಂದು ನನ್ನ ಆರನೇ ಇಂದ್ರಿಯ ಜಾಗೃತ ಗೊಳಿಸುತ್ತಿತ್ತು. ಇದರ ಫಲವೇ ನಾನು "ಸಂಧ್ಯಾ ವಂದನೆ" "ಗಾಯತ್ರಿ ಮಂತ್ರ" "ಈಶಾವಸ್ಯ ಉಪನಿಷತ್ ", "ಹಯಗ್ರೀವ ಮಂತ್ರ", "ಅಥರ್ವ ವೇದ" ಇನ್ನೂ ಅನೇಕ ಶ್ಲೋಕಗಳನ್ನು “ಅಕ್ಷರ” ವಿಧ್ಯೆ ಕ್ರಮದಲ್ಲಿ  ವ್ಯಾಖ್ಯಾನ/ತರ್ಜುಮೆ ಮಾಡಲು ಸಾಧ್ಯವಾಗಿದ್ದು. ಮೊದಲಿಗೆ ಲಭ್ಯ ಪದಗಳ ಮತ್ತು ಲಭ್ಯವಿಲ್ಲದ ಪದಗಳಲ್ಲಿನ ಅಕ್ಷರಗಳ ವ್ಯಾಖ್ಯಾನ ಮಾಡುತ್ತಾ ಕೆಲವು ಕಡೆ ಅಕ್ಷರಾನುವಾದವೇ ಮೂಲ ಸತ್ಯವನ್ನು ತಿಳಿಸಿದ್ದು ಕಂಡು ಬೆರಗಾದೆ. ಇಲ್ಲಿ ಒಂದು ಅಕ್ಷರಕ್ಕೆ ಹತ್ತು ವಿವಿದ ಅರ್ಥ ಇರುತ್ತದೆ ಅಕ್ಕ ಪಕ್ಕ ಉಪಯೋಗಿಸಲಾದ ಅಕ್ಷರಕ್ಕೆ ಹೋಲಿಕೆಯಾಗಿವ ಅರ್ಥ ನೀಡುವ ಸಾಹಿತ್ಯವನ್ನು ಹೊರತರುವ ಒಂದು ಸಣ್ಣ ಪ್ರಯತ್ನ ಮಾಡಿದ್ದೇನೆ. ಹಲವಾರು ಅರ್ಥ ಮತ್ತೆ ರತ್ನಗಳ ರೀತಿಯಲ್ಲಿ ಪೋಣಿಸಿ ಸಂಸ್ಕೃತದಲ್ಲಿ ಅದ್ಬುತ ಸಂದೇಶಗಳನ್ನು ಹೊರತರಬಹುದು. ಒಟ್ಟಿನಲ್ಲಿ ಸಂಸ್ಕೃತ ಸಂಶೋಧನೆಗೆ ಬಹುದೊಡ್ಡ ಸಾಗರವಾಗಿದೆ.

            ಅದರಲ್ಲಿನ ಬೋಧನೆಯನ್ನು ನಾನು ಅನುಷ್ಟಾನಕ್ಕೆ ತಂದಾಗ ನನ್ನಲ್ಲಿ ಆದ ದೈಹಿಕ ಬದಲಾವಣೆ ವಿಸ್ಮಯವನ್ನು ಸೂಚಿಸಿತು, ಸರಿಯಾದ ಸಮಯಕ್ಕೆ ಜಾಗೃತಿ, ವಿಚಾರವಾಗಿ ಓದದೆ ಇದ್ದರೂ ಕೆಲವರಲ್ಲಿ ಮಾತನಾಡುವಾಗ ತರ್ಕ ಬದ್ದ ವಿಶ್ಲೇಷಣೆ, ಎಲ್ಲರಿಗೂ ತಿಳಿಸಿಕೊಡಬೇಕೆಂಬ ಬಯಕೆ, ನಮ್ಮ ಮಾನವ ಸಮಾಜದಲ್ಲಿ ಅದರಲ್ಲೂ ಅನ್ಯ ಮತಗಳಲ್ಲಿ ಇರುವ ಅನೇಕ ಮನೋ ವಿಕಾರಗಳು, ಈರ್ಶೆಗಳು, ಮತಕಲಹಗಳು, ಇವುಗಳಿಗೆ ಮೂಲ ಕಾರಣವೂ ಅರಿವಿಗೆ ಬಂದಾಗ ಮಾನವ ಕಲ್ಯಾಣಕ್ಕಾಗಿ ಅದನ್ನು ಎಲ್ಲರಲ್ಲೂ ತಿಳಿಸುವ ಬಯಕೆ, ಇದರ ಫಲವೇ ಈ ಗ್ರಂಥ.

            ಸಂಸ್ಕೃತದಲ್ಲಿ ಒಂದು ಪದಕ್ಕೆ/ಅಕ್ಷರಕ್ಕೆ ಹತ್ತಾರು ಅರ್ಥವೂ ಇದೆ. ಇಲ್ಲಿವರೆಗೆ ವಿದ್ವಾಂಸರು ಬರೆದಿರುವ ಅನೇಕ ಗ್ರಂಥಗಳಲ್ಲಿ ತಮ್ಮಲ್ಲಿ ಇದ್ದ ಮೂಲಸೌಕರ್ಯಕ್ಕೆ ತಕ್ಕಂತೆ ಅವರಿಗೆ ಆದ ದೈವ ಕೃಪೆಗೆ ಅನುಸಾರವಾಗಿ  ಅನುವಾದಿಸಿದ್ದಾರೆ. ಅದು ಇಂದಿಗೂ ಮಾರ್ಗದರ್ಶಿ ಆದರೆ ಇಂದಿನ ಮುಂದುವರಿದ ತಂತ್ರಜ್ಞಾನ ಅಂದೇ ಇದಿದ್ದರೆ ನಮ್ಮ ಸನಾತನ ಧರ್ಮ ಇಲ್ಲಿಗೆ ಜಗತ್ತನ್ನು ವ್ಯಾಪಿಸುತ್ತಿತ್ತು ಎನ್ನುವುದು ನನ್ನ ಭಾವನೆ. ಸನಾತನ ಗ್ರಂಥ ಸಾರವಾಗಿ ಸಂತ ಮತ್ತು ಕವಿ ಶ್ರೀ ವೇದಾಂತ ದೇಶಿಕನ್ ಹಯಗ್ರೀವ ಸ್ತೋತ್ರವನ್ನು 750 ವರ್ಷದ ಹಿಂದೆಯೇ ರಚಿಸಿದ್ದಾರೆ. ಹಠಯೋಗ ಪ್ರದೀಪಿಕೆಯನ್ನು 600 ವರ್ಷದ ಹಿಂದೆ ಸ್ವಾತ್ಮಾರಾಮ ರಚಿಸಿದ್ದಾರೆ. ಸುಮಾರು 2600 ವರ್ಷದ ಹಿಂದೆ ಈಶಾವಸ್ಯ ಉಪನಿಷತ್  ರಚನೆಯಾಗಿದೆ. ಅನೇಕ ಇತರೆ ಉಪನಿಷದ್ಗಳು ಅದೇ ಸಮಯದಲ್ಲಿ ರಚಿತವಾಗಿದೆ. ಇವು ವೇದ ಸಾರವೆಂದು ಹೇಳಲಾಗಿದೆ. ಶ್ರೀ ಭಾಲಗಂಗಾಧರ ತಿಲಕ್ ರವರ ಪ್ರಕಾರ ವೇದಗಳು ಸುಮಾರು 6000 ವರ್ಷಗಳ ಹಿಂದೆ ರಚಿತವಾಗಿದೆ ಎನ್ನಲಾಗಿದೆ.

            ಅಮರತ್ವವನ್ನು ಅಂದರೆ ಪೂರ್ಣ ಆಯಸ್ಸನ್ನು ಪಡೆಯುವುದು ಈಶ ತತ್ವದಿಂದ ಎಂದು  2600 ವರ್ಷದ ಹಿಂದೆಯೇ ತಿಳಿಸಿಕೊಟ್ಟರೂ ಸಹ ವಿದ್ವಾಂಸರು/ಪರಕೀಯರು ಆದನ್ನು ಅಚಾತುರ್ಯದಿಂದ ತಪ್ಪು ಅರ್ಥೈಸಲಾಗಿ ಪುರಾಣಗಳಲ್ಲಿ ಧ್ಯಾನದ ಶಿವತತ್ವದಿಂದ ಅರ್ಥಾತ್  ಶಿವನಿಂದ ಅಮರತ್ವವನ್ನು ಪಡೆದವರು ಸರ್ವಾಂತರ್ಯಾಮಿಯಾದ ವಿಷ್ಣು ಮತ್ತು ಶಕ್ತಿ ದೇವತೆಗಳಿಂದ (ಕುಂಡಲಿನಿ ಚಕ್ರಗಳಿಂದ) ಹತರಾದ ವಿಚಾರಗಳನ್ನು ತಪ್ಪು ವ್ಯಾಖ್ಯಾನ ಮಾಡಿ ಮತ್ತೆ ಅಂತರ್ ಕಲಹ ಸೃಷ್ಠಿಸಿದ್ದು ಒಂದು ಸೋಜಿಗದ ಸಂಗತಿ.  ಶಿವ ಅಥವಾ ಈಶ ತತ್ವದಿಂದ ಅಮರತ್ವವನ್ನು ಪಡೆದಿದ್ದರೂ ಅಹಂಕಾರ, ಮಧ, ಮಾತ್ಸರ್ಯ, ಅಹಂ, ದೌರ್ಜನ್ಯ, ಕ್ರೂರತೆ, ಕ್ರೌರ್ಯತೆ, ಅಧರ್ಮ ಇವುಗಳನ್ನು ಹವ್ಯಾಸವನ್ನಾಗಿ ಮಾಡಿಕೊಂಡವನಿಗೆ ಮೊದಲು ಅವನ ಮನಸ್ಸೇ ಶತ್ರುವಾಗಿ, ಅವನ ಮನಸ್ಸಿನಲ್ಲಿ ನೆಲಸಿರುವ ಸರ್ವಾಂತರ್ಯಾಮಿಯಾದ ವಿಷ್ಣು ಅವನ ಮುನ್ನಡೆಗೆ ಅಡ್ಡಲಾಗಿ ನಿಂತು, ಅವನ ಪಾದದಲ್ಲಿ ನೆಲೆಸಿರುವ ವಿಷ್ಣು ಅವನ ಚಲನೆಗೆ ಅಡ್ಡಲಾಗಿ  ಸಾವಿಗೆ ಕಾರಣನಾಗುತ್ತಾನೆ. ಇದಲ್ಲದೆ ಶಕ್ತಿ ದೇವತೆಗಳ ವಾಸ ನಮ್ಮ ದೇಹದಲ್ಲಿನ ಚಕ್ರಗಳು ಆಗಿದ್ದು, ಮಾನಸಿಕ ಕಾಯಿಲೆಯಿಂದ ದೈಹಿಕ ಕಾಯಿಲೆ ಉಂಟಾಗಿ ದೇಹದಲ್ಲಿ ಶಕ್ತಿ ದೇವತೆ ಜಾಗ್ರತೆಯೂ ಮಾಯವಾಗಿ ಸಾವಿಗೆ ಕಾರಣವಾಗುತ್ತದೆ. ಎಂದು ತಿಳಿಸುವ ವೇದ ಮತ್ತು ಪಂಚಮ ವೇದಗಳಾದ ಪುರಾಣ ಸಾರವನ್ನು ವಿವಿದವಾಗಿ ಅರ್ಥೈಸಿ ಋಗ್ವೇದದ  ಏಕಂ ಸತ್ ವಿಪ್ರಾಃ ಬಹುಧಾ ವದನ್ತಿ - ಇರುವುದೊಂದೇ ಸತ್ಯ ತಿಳಿದವರು ಅದನ್ನು ಹಲವು ಬಗೆಯಲ್ಲಿ ನಿರೂಪಿಸುತ್ತಾರೆ, ಎಂಬ ವೇದೋಕ್ತಿಯನ್ನು ನಿಜವಾಗಿಸುತ್ತಾರೆ. ಅದಕ್ಕೇ ಹಿಂದು ಸನಾತನ ಧರ್ಮ ಸತ್ಯಾನ್ವೇಷಣೆಗೆ ಪ್ರಾಮುಖ್ಯತೆ ಕೊಟ್ಟಿದ್ದು. ಯಾರೂ ಹೇಳುವುದನ್ನು ನಂಬಬೇಡ ನಿನ್ನ ವಿವೇಚಾನುಸಾರ ಅದನ್ನು ವಿಮರ್ಶಿಸು ನಿನ್ನಲ್ಲಿ ಕ್ಷಣ ಕ್ಷಣವೂ ಧರ್ಮ ಸಂಸ್ಥಾಪನೆ ಆಗುತ್ತೆ ಎಂದು ವಿಧ್ವಾಂಸರು ಹೇಳುತ್ತಾರೆ.

            ಇಂತಹ ಸನಾತನ ಧರ್ಮದ ಮೂಲದಿಂದಲೇ ಬಂದಂತಾ ಅನೇಕ ಆಚರಣೆಗಳ ಮತಗಳು ನಾವು ತಿಳಿದಿದ್ದೇ ಸತ್ಯ ಎಂದು ತಮ್ಮ ಆಚರಣೆಯಲ್ಲಿ ವಿಫಲವಾಗಿ, ಬೋಧನೆಯಲ್ಲಿ ಸಫಲವಾಗಿ ಮುಖ್ಯ ಗುರಿಯನ್ನು ತಲುಪದೆ ಎಸ್ಟೋ ಜನರನ್ನು ದಾರಿ ತಪ್ಪಿಸಿದ್ದಾರೆ ಇಂದಿಗೂ ತಪ್ಪುತ್ತಿದ್ದಾರೆ. ಅದರಲ್ಲಿ ಯಹೂದಿಗಳು, ಕ್ರೈಸ್ತರೂ, ಮುಸ್ಲಿಮರು, ಹೀಗೆ ಅನೇಕ ಮತದವರಿದ್ದಾರೆ.  ಸತ್ಯದ ಅರಿವಾಗಿದ್ದರೆ ಅವರಲ್ಲಿ ತಾವೇ ಶ್ರೇಷ್ಠರು ಎನ್ನುತ್ತಿರಲಿಲ್ಲ, ಕೆಲವು ಮೂಡರ ತಪ್ಪುಗಳಿಗೆ ಇಡೀ ವೇದವನ್ನು ತಿರಸ್ಕರಿಸುತ್ತಿರಲಿಲ್ಲ. ಮೊದಲು ಅಂತರಂಗದಿಂದ ಶುದ್ದಿಯಾಗಬೇಕು ಅಂತಹ ಅಂತರಂಗ ಶುದ್ದಿಯ ವಿಧಾನವನ್ನು ಮೊದಲು ಹೇಳಿದ್ದೇ ಸನಾತನ ಗ್ರಂಥಗಳು. ಆದರೆ ಅಂತಹ ಅಂತರಂಗ ಶುದ್ದಿ ಇಲ್ಲದೆ ಇರುವ ಜ್ಞಾನವನ್ನು ಭೋದಿಸುತ್ತಾ ಹೋದರೆ ನಿಮಗೆ ಸಾಕ್ಷಾತ್ಕಾರವಾಗುವ ಹೆಚ್ಚಿನ ಜ್ಞಾನವೂ ಎಲ್ಲಿಂದ ಬರಬೇಕು. ದಿನ ನಿತ್ಯ ಜ್ಞಾನದಿಂದ ಕೂಡಿರುವ ಸತ್ಯ ಶೋಧನೆಯೇ ಈ ಗ್ರಂಥದಲ್ಲಿ ಇರುವ ಸನಾತನ ಸತ್ಯಗಳು.

            ಸಂಸ್ಕೃತದಲ್ಲಿ ಒಂದೊಂದು ಅಕ್ಷರಕ್ಕೂ ಬಹಳ ವಿಶಿಷ್ಟವಾದ  ಅರ್ಥವನ್ನು ಅನಾದಿಯಿಂದ ನೀಡಲಾಗಿದೆ, ಯಾವ ಅಕ್ಷರ ಯಾವ ಸಂಧರ್ಬದಲ್ಲಿ ಯಾವ ಅಕ್ಷರದ ಜೊತೆ ಉಲ್ಲೇಕಿಸಲಾಗಿದೆ ಎಂಬುದರಲ್ಲಿ ಸಂಸ್ಕೃತದ ಪ್ರಾಚೀನ ವೇದ, ಉಪನಿಷತ್, ಪುರಾಣ, ಅನೇಕ ಮಂತ್ರಗಳಲ್ಲಿ ಅನೇಕ ನಾಮಾಂಕಿತ ಪದಗಳಲ್ಲಿ ಅಡಗಿರುವ ನಿಗೂಡ ವಿಸ್ಮಯ ಸತ್ಯ ತಿಳಿಯುವುದೇ ಬ್ರಹ್ಮ ಜ್ಞಾನಕ್ಕೆ ದಾರಿಯಾಗಿದೆ. ಅಂತಹ  ವಿಶಿಷ್ಟ ಪದಗಳು ಅಕ್ಷರಗಳ ಸತ್ಯಾರ್ಥವೇ ಈ ಗ್ರಂಥದ ಸಾರ. ಧ್ಯಾನ ಮತ್ತು ವಿಶ್ಲೇಷಣೆಯ ಮೂಲಕ ನನ್ನ ಆವಿಷ್ಕಾರದ ಪ್ರಕಾರ ಸಂಸ್ಕೃತದ ಅರ್ಥವನ್ನು ಪ್ರತಿ ಪದವನ್ನು ಕನಿಷ್ಠ ಸಂಭವನೀಯ ಪದ ಅಥವಾ ಅಕ್ಷರದಂತೆ ವಿಂಗಡಿಸುವ ಮೂಲಕ ತಲುಪಬೇಕು. ಅಂತಹ ಅಕ್ಷರದ ಅರ್ಥ ಅಥವಾ ಅಕ್ಷರಗಳ ಕನಿಷ್ಠ ಸಂಯೋಜನೆಯು ನಿಘಂಟಿನಲ್ಲಿ ಲಭ್ಯವಿದ್ದಾಗ, ಅವುಗಳ ಅರ್ಥವನ್ನು ನಿಯೋಜಿಸಬೇಕು. ಅಕ್ಷರವು ಸಂಯೋಜಿತ ರೂಪದಲ್ಲಿದ್ದರೆ, ಅದನ್ನು ಮತ್ತಷ್ಟು ವಿಂಗಡಿಸಬೇಕು. ಒಂದೊಂದು ಅಕ್ಷರಕ್ಕೂ ಹಲವು ಅರ್ಥಗಳಿರುತ್ತವೆ. ಸುತ್ತುವರಿದ ಅಕ್ಷರಗಳ ಅರ್ಥವನ್ನು ಪರಿಶೀಲಿಸುವ ಮೂಲಕ ಪ್ರತಿ ಅಕ್ಷರದ ಅರ್ಥಗಳನ್ನು ಆಯ್ಕೆ ಮಾಡಬೇಕು. ವಾಕ್ಯದ ಸ್ಪಷ್ಟ ಅರ್ಥಪೂರ್ಣ ಸಂಯೋಜನೆಯನ್ನು ತಲುಪಲಾಗುತ್ತದೆ. ಅನುವಾದಿಸಿದ ಭಾಗದಿಂದ ಅರ್ಥಪೂರ್ಣ ವಾಕ್ಯವನ್ನು ತಲುಪಲು ಪದವನ್ನು ವಿಂಗಡಿಸಬೇಕು.

            ಸಮಗ್ರ ಅಧ್ಯಯನ ಮತ್ತು ವ್ಯಾಖ್ಯಾನದ ಪ್ರಯತ್ನ ಈ ಗ್ರಂಥದ ಸಾರವಾಗಿದೆ. ಇದರಲ್ಲಿ ಉತ್ತಮ ಬೋಧನೆಗಳನ್ನು ಅನುಷ್ಟಾನಕ್ಕೆ ತಂದು ವಿಮರ್ಶಿಸುವ ಪ್ರಯತ್ನ ಓದುಗರದ್ದಾಗಬೇಕು. ನಮ್ಮ ದೇಹದಲ್ಲಿ ಇಡ, ಪಿಂಗಳ ಮತ್ತು ಸುಷುಮ್ನಾ ಎಂಬ ನಾಡಿಗಳು ಇರುತ್ತವೆ, ಸುಷುಮ್ನಾದಲ್ಲಿ ಏಳು ಚಕ್ರಗಳ ಸಂಪರ್ಕ ಇದೆ. ಈ ಮುಂದಿನ ಚಿತ್ರ ಗಮನಿಸಿ. ಇದನ್ನು ಹಾವಿನ ರೀತಿಯಲ್ಲಿ ಕೆಲವರು ಚಿತ್ರಿಸುವುದೂ ಉಂಟು. ಒಟ್ಟಾರೆ ಉಸಿರನ್ನು ಒಳ ಎಳೆದು ಹೃದಯದ ಅನಾಹತ ಚಕ್ರಬಾಗವನ್ನು ತುಂಬಿ ನಂತರ ಗರ್ಭವನ್ನು ತುಂಬಬೇಕು ನಂತರ ಕಿಬ್ಬೊಟ್ಟೆಯನ್ನು ಒಳ ಎಳೆದಾಗ ಮೂಲಾಧಾರದ ಬಳಿ ಇರುವ ಸುಷುಮ್ನಾ ನಾಡಿಯ ದ್ವಾರ ತೆರೆದುಕೊಳ್ಳುತ್ತದೆ. ಅಲ್ಲಿಂದ ಗರ್ಭದಲ್ಲಿರುವ ಶ್ರೇಷ್ಠ ಸಂಪತ್ತನ್ನು ಹಾವಿ ರೂಪದಲ್ಲಿ ಆರು ಚಕ್ರಗಳ ಮುಖೇನ  ಸಹಸ್ರಾರದ ಕಡೆಗೆ ಕಳಿಸಿದಾಗ ಅದು ನದಿಯಂತೆ ಎಲ್ಲಾ ಚಕ್ರಗಳಲ್ಲಿ ಸಂಪರ್ಕ ಇರುವ ನಾಡಿಗಳಲ್ಲಿ ಹರಿಯುತ್ತದೆ. ಇದು ಆರೋಗ್ಯ ಮತ್ತು ಜ್ಞಾನವರ್ಧಕವನ್ನು ಮಾಡುತ್ತದೆ. ಇಂತಹ ಹರಿವನ್ನು ಸರಸ್ಪತಿ ನದಿ ಎಂದೂ ಕರೆಯಲಾಗಿದೆ. ಇನ್ನೊಂದು ವಿಧಾನ ಉಸಿರನ್ನು ಒಳ ಎಳೆದು ಹೃದಯದ ಅನಾಹತ ಚಕ್ರಬಾಗವನ್ನು ತುಂಬಿ ನಂತರ ಗರ್ಭವನ್ನು ತುಂಬಬೇಕು ನಂತರ ಉಸಿರನ್ನು ಇಡ ಮತ್ತು ಪಿಂಗಳ ಮುಖೇನ ಮೇಲೆ ಕಳಿಸಬೇಕು ಇದು ಆಜ್ಞಾ ಚಕ್ರದಲ್ಲಿ ಕೊನೆಯಾಗುತ್ತದೆ.

            ಈ ಪುಸ್ತಕವನ್ನು ರಚಿಸಿ ಮುಗಿಸುವುದಕ್ಕೆ ನನ್ನ ಅಮೂಲ್ಯ ವೇಳೆಯನ್ನು ಇದಕ್ಕಾಗಿಯೇ ಉಪಯೋಗಿಸಿ, ನನ್ನ ಆರೋಗ್ಯದ ಕಡೆ ನಿರ್ಲಕ್ಷ ವಹಿಸಿದೆ, ಪರಿಣಾಮವಾಗಿ ಬರೀ ಧ್ಯಾನದಿಂದ ನನ್ನ ದೇಹದಲ್ಲಿ ಉಂಟಾದ ಶಾಖೋತ್ಪನ್ನದಿಂದ ನನ್ನ ಜೀರ್ಣ ಕ್ರಿಯೆ ಏರುಪೇರಾಗಿ ಆಸನ ಕಾಯಿಲೆಗೆ ತುತ್ತಾಗಿ ಆಯುರ್ವೇದ ಪಂಡಿತರಿಂದ ಚಿಕಿತ್ಸೆ ಪಡೆದು ಮತ್ತೆ ನನ್ನ ದೇಹ ಸ್ಥಿತಿ ಉತ್ತಮ ಆಗುವುದಕ್ಕೆ ಕಾಲ ಬೇಕಾಯಿತು. ಏನಿದು ಆರೋಗ್ಯದ ವೇದ ರಹಸ್ಯವನ್ನು ತಿಳಿಸಲು ಮುಂದಾದ ನನ್ನ ಮೇಲೆ ದೇವರ ಅವಕೃಪೆ ಆಯಿತೇ ಎಂಬ ಯೋಚನಾ ಲಹರಿಯು ಹರಿಯಿತು. ಇಲ್ಲ ಇಲ್ಲ ಇದರಲ್ಲಿ ಸರಿಯಾದ ಆಹಾರ ಕ್ರಮವಿಲ್ಲದೆ, ಉಂಟಾಗಬಹುದಾದ ಖಾಯಿಲೆ ಸ್ವರೂಪವನ್ನು ದೇವರು ತಿಳಿಸಿಕೊಡಲಿಕ್ಕಾಗಿಯೇ ನನ್ನಲ್ಲಿ ಇಟ್ಟ ಅಗ್ನಿ ಪರೀಕ್ಷೆ ಎಂದು ಅರಿವಾಯಿತು. ಧ್ಯಾನವನ್ನು ಬಹಳ ಸುಲಭವಾಗಿ ಮಾಡಬಹುದು ಆದರೆ ಅದರಲ್ಲಿ ನಮ್ಮ ದೇಹಕ್ಕೆ ಬಹಳ ಶಾಖ ಉಂಟು ಮಾಡುತ್ತದೆ. ಇದರಿಂದ ಹೆಚ್ಚು ಬಿ.ಪಿ., ಜೀರ್ಣ ಕ್ರಿಯೆ ಏರುಪೇರು, ಆಸನದಲ್ಲಿ ಅತಿ ಹೆಚ್ಚು ಉಷ್ಣತೆಯ ಪರಿಣಾಮಗಳು ಉಂಟಾಗುತ್ತವೆ. ನಮ್ಮ ಆಹಾರದಲ್ಲಿ ಮೊಳಕೆ ಹೆಸರು ಕಾಳು, ಇತರೆ ಕಾಳು ಗಂಜಿ, ಮಜ್ಜಿಗೆ, ತ್ರಿಫಲಾ ಚೂರ್ಣ, ಜೇನುತುಪ್ಪ, ಹಸುವಿನ ತುಪ್ಪ, ವಾಯು ವಿಕಾರತೆ ಆದರೆ ಆಯುರ್ವೇದ ಔಷಧ, ಸೊಗದೆ ಬೇರಿನ ಶರಭತ್ತು,  ಆಲೋವೆರಾ ಜ್ಯೂಸ್, ಆಮ್ಲ ಜ್ಯೂಸ್, ತರಕಾರಿ ಮತ್ತು ಸೊಪ್ಪಿನ  ಆಹಾರ, ಹೀಗೆ ಆಹಾರ ಕ್ರಮವನ್ನು ಇಟ್ಟು ಧ್ಯಾನಾಸಕ್ತರಾದರೆ ದೇಹದಲ್ಲಿ ವಾತ, ಪಿತ್ತ ಮತ್ತು ಕಫ ಸಮತೋಲನ ಹೊಂದಿ ದೇಹದ ಆರೋಗ್ಯ ಇರುತ್ತದೆ. ಈ ಪುಸ್ತಕದಲ್ಲಿ ನೀಡಿರುವ ಮಾರ್ಗದರ್ಶನವನ್ನು ಪಾಲಿಸುವ ಮುನ್ನ ಯೋಗ, ಪ್ರಾಣಾಯಾಮ ಮತ್ತು ಧ್ಯಾನದ ಮೂಲಭೂತ ಪ್ರಕ್ರಿಯೆ ತಿಳಿಯಬೇಕು. ಹಾಗೆಯೇ ಆಯುರ್ವೇದ ಅಥವಾ ನೈಸರ್ಗಿಕ ಚಿಕಿತ್ಸಾ ತಾಣಗಳಲ್ಲಿ ತಮ್ಮ ದೇಹದಲ್ಲಿನ ಕಲ್ಮಶವನ್ನು ಹೊರಹಾಕುವ ವಿಧಾನ ಕಲಿಯುವುದು ಲೇಸು. ಅಲ್ಲಿನ ನುರಿತರು ಹೇಳಿಕೊಡುವ ಪ್ರಾರ್ಥಮಿಕ ಹಂತಗಳನ್ನು ಕಲಿತು ನಂತರವೇ ಈ ಪುಸ್ತಕದಲ್ಲಿನ ಧ್ಯಾನ ವಿಧಾನವನ್ನು ಮಾಡುವುದು ಒಳಿತು.

            ಇದರಲ್ಲಿ ನೀಡಲಾಗಿರುವ ವಿವರಣೆ, ವ್ಯಾಖ್ಯಾನ, ಶ್ಲೋಕಗಳು ಬಹಳ ಕಾಳಜಿವಹಿಸಿ ಉತ್ತಮ ರೂಪವನ್ನು ಕೊಟ್ಟಿರುತ್ತೇನೆ, ಕಶ್ಯಪ ಮಹರ್ಷಿಯ ಗೋತ್ರದವನಾಗಿ, ಜನ್ಮ ಜನ್ಮಾಂತರದ ಆಶೀರ್ವಾದ ಹೊಂದಿ ವಿಶ್ವಕರ್ಮ ಕುಲದವನಾಗಿ ಜನ್ಮ ಪಡೆದು, ಕುಲದೇವತೆ ಕಾಳಿ ಆಶೀರ್ವಾದದಿಂದ ಜ್ಞಾನ ಶಕ್ತಿಯನ್ನು ಹೊಂದಿ, ಕುಲ ಗುರು ಶ್ರೀ ಪೋತಲೂರು ವೀರಬ್ರಹ್ಮೇಂದ್ರ ಸ್ವಾಮಿಗಳ ಆಶೀರ್ವಾದದಿಂದ, ವಿಧ್ಯಾ ನಾಡು ತುಮಕೂರಿನ ದೈವಭಕ್ತ ದಂಪತಿಗಳಲ್ಲಿ ಜನಿಸಿ, ತಪಸ್ಸ್ವಿಗಳು ಮತ್ತು ನಡೆದಾಡುವ ದೇವರು ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ಬಸವ ತತ್ತ್ವ ಅನುಯಾಯಿತ್ವದಲ್ಲೂ ಸಂಸ್ಕೃತ ಶಾಲೆ ಪೋಷಣಾ ಆಸಕ್ತಿಯಿಂದ ಪ್ರೇರಿತನಾಗಿ, ಮನೆ ದೇವರು ಜಪದ ಮಹಾಮುನಿ ಮುನೇಶ್ವರ ಸ್ವಾಮಿ ಆಶೀರ್ವಾದದಿಂದ ಅನೇಕ ಏಳು ಬೀಳು ಸಂಯಮದಿ ದಾಟಿ, ಈ ವಿಚಾರವಾಗಿ ನನ್ನಲ್ಲಿ ಉಂಟಾದ ಆಸಕ್ತಿಯ ಪ್ರಯತ್ನದ ಫಲ ನಿಮ್ಮೆಲ್ಲರ ಜೀವಗಳಿಗೆ ಉಪಯೋಗವಾಗಿ ಇನ್ನೂ ಹೆಚ್ಚಿನ ಸತ್ಯ ಸಾಹಿತ್ಯ ಅನೇಕ ವಿಧ್ವಾಂಸರಿಂದ ಹೊರಬರಲಿ ಎಂದು ಪ್ರಾರ್ಥಿಸುತ್ತೇನೆ.

ಎನ್. ಶ್ರೀಧರ ಬಾಬು 


No comments:

Post a Comment

ಪ್ರಾಣ ವಿದ್ಯಾ ವೇದ ರಹಸ್ಯ - 14

  ಅಧ್ಯಾಯ - 17        ವೈಜ್ಞಾನಿಕ ವಿವರಣೆಗಳು   ನಮ್ಮ ದೇಹದ ಉಸಿರಾಟ ವಿಧಾನ               ವಿಜ್ಞಾನಿಗಳು ಕಂಡುಕೊಂಡಂತೆ , ಗಾಳಿಯಲ್ಲಿನ ದೂಳಿನ ದೊಡ್ಡ...